ಭಾರತೀಯ ಸೇನೆ ಸೇರಿ ಹುತಾತ್ಮ ಯೋಧನಿಗೆ ನಿಜವಾದ ಗೌರವ ಸಲ್ಲಿಸಿದ ಪತ್ನಿ – Vishwanews24
ಮುಂಬೈ, :ಡಿಸೆಂಬರ್ 2017ರಲ್ಲಿ ಅರುಣಾಚಲ ಪ್ರದೇಶದ ಗಡಿಭಾಗ ತವಾಂಗ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಪ್ರಸಾದ್ ಮಹದಿಕ್ ಅವರ ಪತ್ನಿ ಗೌರಿ ಮಹದಿಕ್ ಭಾರತೀಯ ಸೇನೆ ಸೇರುವ ಮೂಲಕ ದೇಶಸೇವೆ ಮಾಡಲು ಮುಂದಾಗಿದ್ದಾರೆ.
ಮೂಲತಃ ಮುಂಬೈ ವಿರಾರ್ ಪ್ರದೇಶದ ನಿವಾಸಿಯಾದ ಗೌರಿಗೆ ಈಗ 32 ವರ್ಷ. ತನ್ನ ಪತಿಗೆ ಗೌರವ ಸಲ್ಲಿಸುವುದಕ್ಕಾಗಿ ತಾನು ಸೇನೆ ಸೇರಲು ನಿರ್ಧರಿಸಿದ್ದೇನೆ ಎಂದು ಗೌರಿ ಹೇಳಿದ್ದಾರೆ. ಪತಿ ಸಾವನ್ನಪ್ಪಿದ ಕೆಲವೇ ದಿನಗಳಲ್ಲಿ ಗೌರಿ ಸೇನೆಗೆ ಸೇರ್ಪಡೆಯಾಗಲು ನಿರ್ಧರಿಸಿದರಂತೆ. ಒಂದು ವರ್ಷ ಮಿಲಿಟರಿ ತರಬೇತಿ ಪಡೆದ ಗೌರಿ ಲೆಫ್ಟಿನೆಂಟ್ ಆಗಿ ಸೇನೆಗೆ ಸೇರಲಿದ್ದಾರೆ. ಸರ್ವೀಸಸ್ ಸೆಲೆಕ್ಷನ್ ಬೋರ್ಡ್ (ಎಸ್ಎಸ್ಬಿ) ಪರೀಕ್ಷೆಯಲ್ಲಿ ಎರಡನೇ ಪ್ರಯತ್ನದಲ್ಲಿ ವಿಧವೆಯರ ಕೆಟಗರಿಯಲ್ಲಿ ಗೌರಿ ಟಾಪರ್ ಆಗಿದ್ದಾರೆ.
ಒಂದು ವರ್ಷದ ನಂತರ ಇದೀಗ ಅಧಿಕಾರಿಗಳ ತರಬೇತಿ ಸಂಸ್ಥೆಗೆ ಸೇರಲು ಎಲ್ಲ ಸಿದ್ಧತೆ ನಡೆಸಿದ್ದಾರೆ. “ನಾನು ವಕೀಲೆ ಹಾಗೂ ಕಂಪನಿ ಸೆಕ್ರೆಟರಿ. ಉದ್ಯೋಗ ಮಾಡಿಕೊಂಡಿದ್ದೆ. ನನ್ನ ಪತಿಯ ಮರಣದ ನಂತರ ಉದ್ಯೋಗವನ್ನು ಬಿಟ್ಟೆ. ಸೇನೆಗೆ ಸೇರಲು ತಯಾರಿ ನಡೆಸಿದೆ. ಆ ಮೂಲಕ ನನ್ನ ಪತಿಗೆ ಗೌರವ ಸಲ್ಲಿಸಬೇಕು ಅಂದುಕೊಂಡೆ.
ಮಿಲಿಟರಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಗೌರವ ಮತ್ತು ಹೆಮ್ಮೆ ಇದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನನ್ನ ಧೀರ ಪತಿಗೆ ನನ್ನ ಈ ಸಾಧನೆಯನ್ನು ಅರ್ಪಿಸುತ್ತಿದ್ದೇನೆ ಎಂದು ಗೌರಿ ಹೇಳಿದ್ದಾರೆ. ನನ್ನ ಜೀವನದಲ್ಲಿ ಅದು ಕಷ್ಟದ ದಿನಗಳಾಗಿದ್ದವು. ಆಗ ನಾನು ವಾಸ್ತವವನ್ನು ಸ್ವೀಕರಿಸಲು ಸಿದ್ಧಳಿರಲಿಲ್ಲ. ಕೆಲವು ತಿಂಗಳ ನಂತರ ನಾನು ಸೇನೆ ಸೇರಲು ನಿರ್ಧರಿಸಿದೆ. ಈ ಕನಸನ್ನು ನನಸು ಮಾಡಲು ನಾನು ಮಾನಸಿಕವಾಗಿ ತುಂಬಾ ಗಟ್ಟಿಯಾದೆ ಎಂದು ಗೌರಿ ಹೇಳಿಕೊಂಡಿದ್ದಾರೆ.
ಕಳೆದ ವರ್ಷ ಸರ್ವೀಸ್ ಸೆಲೆಕ್ಷನ್ ಬೋರ್ಡ್ (SSB) ಪರೀಕ್ಷೆ ಎದುರಿಸಿ ತೇರ್ಗಡೆಯಾಗಿದ್ದ ಅವರು OTA ದಲ್ಲಿ ತರಬೇತಿಗೆಂದು ಆಯ್ಕೆಯಾಗಿದ್ದಾರೆ. ಏಪ್ರಿಲ್ ತಿಂಗಳಿಂದ ಆರಂಭವಾಗುವ 49 ವಾರಗಳ ತರಬೇತಿ ಮುಗಿಸಿದ ಬಳಿಕ ಮಾರ್ಚ್ 20 ರಿಂದ ಅವರು ಸೈನ್ಯ ಸೇರಲಿದ್ದಾರೆ.
#WATCH: Late Army Major Prasad Mahadik's wife Gauri Mahadik, who will join Indian Army next year, says, "he always wanted me to be happy & smiling. I decided I'll join the forces, I'll wear his uniform, his stars on our uniform. Our uniform because it will be his and my uniform". pic.twitter.com/vrCGdn5ZfA
— ANI (@ANI) February 24, 2019

