ಭಾರೀ ಮಳೆಯಿಂದ ಗುಡ್ಡಕುಸಿತ : ವಾಹನ ಸಂಚಾರ ಸಂಪೂರ್ಣ ಸ್ಥಗಿತ

Featured, ದಕ್ಷಿಣ ಕನ್ನಡ

ಮಂಗಳೂರು : ಎಲ್ಲೆಲ್ಲೂ  ವರುಣನ ಆರ್ಭಟ ಹೆಚ್ಚಾಗಿದೆ.  ಭಾರಿ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ  ಗುಡ್ಡ ಕುಸಿತ ಆರಂಭವಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಸೋಮವಾರ ರಾತ್ರಿಯಿಂದ ಚಾರ್ಮಾಡಿ ಘಾಟ್‌ನಲ್ಲಿ  ಪ್ರಯಾಣಿಕರು  ಸಿಲುಕಿಕೊಂಡು ನೀರು, ತಿಂಡಿ‌ ಸಿಗದೇ ಪರದಾಡುವಂತ  ಸ್ಥಿತಿ ಉಂಟಾಗಿದೆ.

ಒಟ್ಟು 9 ಕಡೆ ಗುಡ್ಡ ಕುಸಿದಿದ್ದು, ಇನ್ನು‌ ಕೆಲವೆಡೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಎರಡು ಕಡೆಗಳಲ್ಲಿ‌ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಣ್ಣು ತೆರವಿಗೆ ಜೆಸಿಬಿ, ಹಿಟಾಚಿಗಳನ್ನು ಸ್ಥಳಕ್ಕೆ ತರಲಾಗಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ.

ಮಳೆಯಿಂದಾಗಿ ಮಣ್ಣು  ತೆರವು ಕಾರ್ಯ ವಿಳಂಬವಾಗುತ್ತಿದೆ. ಆದರೂ ಮಣ್ಣು ತೆರವು ಮಾಡಲು‌ ನಿರಂತರ ಕೆಲಸ ಮಾಡಲಾಗುತ್ತಿದೆ. ಮಣ್ಣು ಕುಸಿತದಿಂದ ಹಾಸನ ಮಾರ್ಗದ ರೈಲು ಸಂಚಾರ‌ ಸೋಮವಾರದಿಂದ ಸ್ಥಗಿತಗೊಂಡಿತ್ತು, ಈಗ ರಸ್ತೆ ಸಂಚಾರವೂ ಸ್ಥಗಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಡ್ಡ ಕುಸಿತದಿಂದ  ವಾಹನಗಳು ಸರದಿಯಲ್ಲಿ ನಿಂತಿದ್ದು,   ಜನರಿಗೆ ಆಹಾರದ  ವ್ಯವಸ್ಥೆ ಮಾಡಲಾಗಿತ್ತು, ಆದರೆ ಜನರ ಸಂಖ್ಯೆ ಹೆಚ್ಚಾಗಿದ್ದರಿಂದ ಎಲ್ಲರಿಗೂ ತಿಂಡಿ, ನೀರು ಒದಗಿಸುವುದು ಕಷ್ಟಕರವಾಗಿದೆ.