ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ : ಬೆಂಬಲ ಕೋರಿ ಸಿಎಂಗೆ ಪತ್ರ ಬರೆದ ಕ್ಯಾ.ಚೌಟ – vishwanews24
ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ : ಬೆಂಬಲ ಕೋರಿ ಸಿಎಂಗೆ ಪತ್ರ ಬರೆದ ಕ್ಯಾ.ಚೌಟ
ಮಂಗಳೂರು: ಮಂಗಳೂರು ವ್ಯಾಪ್ತಿಯ ರೈಲು ಜಾಲವನ್ನು ನೈರುತ್ಯ ರೈಲ್ವೆ ವಲಯಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದ್ದು, ಈ ಬಗ್ಗೆ ರೈಲ್ವೆ ಮಂಡಳಿ ಹೊರಡಿಸಿರುವ ಅಧಿಸೂಚನೆಯನ್ನು ಕಾರ್ಯರೂಪಕ್ಕೆ ತರುವುದಕ್ಕೆ ರಾಜ್ಯ ಸರ್ಕಾರವು ಪೂರ್ಣ ರೀತಿಯ ಆಡಳಿತಾತ್ಮಕ ಸಹಕಾರ ನೀಡಬೇಕೆಂದು ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗೆ ಬರೆದಿರುವ ಈ ಸುಧೀರ್ಘ ಪತ್ರದಲ್ಲಿ ಕ್ಯಾ. ಚೌಟ ಅವರು ಹಲವಾರು ವಿಚಾರಗಳನ್ನು ಉಲ್ಲೇಖಿಸಿದ್ದು, ಮಂಗಳೂರು ರೈಲು ಜಾಲವನ್ನು ಪಾಲ್ಘಾಟ್ ವಿಭಾಗದಿಂದ ಬೇರ್ಪಡಿಸಿ ಮೈಸೂರು ವಿಭಾಗಕ್ಕೆ ಸೇರಿಸುವುದಕ್ಕೆ ರೈಲ್ವೆ ಸಚಿವಾಲಯವು ಈಗಾಗಲೇ ಅಗತ್ಯ ಕ್ರಮ ಕೈಗೊಂಡು ಈ ಬಗ್ಗೆ ಅಧಿಸೂಚನೆ ಕೂಡ ಹೊರಡಿಸಿದೆ. ಕರಾವಳಿ ರೈಲು ಪ್ರಯಾಣಿಕರ ಬಹು ವರ್ಷಗಳ ಈ ಬೇಡಿಕೆ ಈಡೇರಿರುವುದಿಂದ ಈ ಭಾಗಕ್ಕೆ ಮಾತ್ರವಲ್ಲ ಸಮಗ್ರ ಕರ್ನಾಟಕದ ರೈಲು ಜಾಲ ಬಲವರ್ಧನೆಗೂ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಮಂಗಳೂರು: ಸಾಂಬಾರ್‌ನಲ್ಲಿ ಜಿರಳೆ ; ತೊಕ್ಕೊಟ್ಟುವಿನ ಹೋಟೆಲ್ ಮೇಲೆ ಆರೋಗ್ಯ ಅಧಿಕಾರಿಗಳ ದಾಳಿ – vishwanews24
ಹೀಗಿರುವಾಗ, ಆದಷ್ಟು ಬೇಗ ಮಂಗಳೂರು ರೈಲು ಭಾಗವನ್ನು ಮೈಸೂರು ವಿಭಾಗದ ಜತೆಗೆ ಸೇರಿಸುವ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಜತೆಗೆ, ಈ ನಿಟ್ಟಿನಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ಆಡಳಿತಾತ್ಮಕ ವಿಳಂಬ ಆಗದ ರೀತಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕ್ಯಾ. ಚೌಟ ಅವರು ಸಿಎಂಗೆ ಮನವಿ ಮಾಡಿದ್ದಾರೆ.
ರೈಲ್ವೆ ಮಂಡಳಿ ಹೊರಡಿಸಿರುವ ಮಹತ್ವದ ಈ ಆದೇಶ ಮರುಪರಿಶೀಲಿಸುವಂತೆ ಕೇರಳ ಮುಖ್ಯಮಂತ್ರಿಗಳಿಂದ ಹಿಡಿದು ಅಲ್ಲಿನ ರಾಜಕೀಯ ಪಕ್ಷಗಳು ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ವರದಿಯಾಗಿದೆ. ಈ ಎಲ್ಲ ಬೆಳವಣಿಗೆ ಗಮನಿಸಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಮಂಗಳೂರು ರೈಲು ಭಾಗ ಮೈಸೂರು ವಿಭಾಗಕ್ಕೆ ಸೇರಿಸುವ ಮೂಲಕ ಕರ್ನಾಟಕದ ಹಿತ ಕಾಪಾಡುವುದಕ್ಕೆ ಡಿ.ಕೆ. ಶಿವಕುಮಾರ್ ಅವರು ಬಹಳ ತುರ್ತಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಆ ಮೂಲಕ, ಯಾವುದೇ ಕಾರಣಕ್ಕೂ ರೈಲ್ವೆ ಸಚಿವಾಲಯದ ಈ ಆದೇಶ ಜಾರಿಗೆ ಅಡ್ಡಿ-ಆತಂಕಗಳು ಎದುರಾಗದಂತೆ ನೋಡಿಕೊಳ್ಳಬೇಕೆಂದು ಕ್ಯಾ. ಚೌಟ ಅವರು ಕೋರಿದ್ದಾರೆ.
ಈ ನಿರ್ಧಾರದಿಂದ ಮಂಗಳೂರು ರೈಲ್ವೇ ಜಾಲದ ಸಮಗ್ರ ಸುಧಾರಣೆ, ಆಡಳಿತ ವ್ಯವಸ್ಥೆ ಮತ್ತು ಕಾರ್ಯಾಚರಣೆಗೆ ಹೆಚ್ಚಿನ ಅನುಕೂಲವಾಗಲಿದೆ. ಭಾರತ ಸರ್ಕಾರವು ವಸ್ತುಸ್ಥಿತಿಯ ಪರಾಮರ್ಶಿಸಿ ಇಡೀ ಕರಾವಳಿ ಹಾಗೂ ಕರ್ನಾಟಕದ ರೈಲು ವ್ಯವಸ್ಥೆಯನ್ನ ಮತ್ತಷ್ಟು ಬಲವರ್ಧನೆಗೊಳಿಸುವುದಕ್ಕೆ ಮಹತ್ವದ ನಿರ್ಧಾರವನ್ನು ಅಂತಿಮವಾಗಿ ಕೈಗೊಂಡು ಅಧಿಸೂಚನೆ ಹೊರಡಿಸಿದೆ.
ಹೀಗಿರುವಾಗ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನೆರೆಯ ರಾಜ್ಯದ ವಿರುದ್ಧದ ನಿಲುವಾಗಿ ನೋಡದೆ, ಮಂಗಳೂರಿನ ಆಡಳಿತಾತ್ಮಕ ಅಗತ್ಯವೆಂದು ಪರಿಗಣಿಸಬೇಕಿದೆ. ಅಲ್ಲದೆ, ಕೇರಳದ ಕಡೆಯಿಂದ ಅಪಸ್ವರ ಕೇಳಿ ಬಂದಿರುವ ಕಾರಣ, ಕರ್ನಾಟಕ ಸರ್ಕಾರವು ತನ್ನ ಸ್ಪಷ್ಟ ನಿಲುವನ್ನು ಕೂಡಾ ಕೇಂದ್ರ ಸರ್ಕಾರದ ಮುಂದೆ ಅಧಿಕೃತವಾಗಿ ಮಂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕ್ಯಾ. ಚೌಟ ಅವರು ಸಿಎಂ ಡಿಕೆ ಶಿವಕುಮಾರ್‌ಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.
