ಮಂಗಳೂರು ಸೇರಿ ಐದು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಪಡೆದುಕೊಂಡ ಅದಾನಿ ಕಂಪನಿ – Vishwanews24
ನವದೆಹಲಿ: ಗುಜರಾತ್ ಮೂಲದ ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ ಈಗ ಅಧಿಕೃತವಾಗಿ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ಮಂಗಳೂರು ಸೇರಿದಂತೆ ದೇಶದ ಐದು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಅದಾನಿ ಕಂಪನಿ ಪಡೆದುಕೊಂಡಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ)ದ ವ್ಯಾಪ್ತಿಯಲ್ಲಿ ಬರುವ ಒಟ್ಟು 6 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸೋಮವಾರ ಹರಾಜು ಪ್ರಕ್ರಿಯೆ ನಡೆಯಿತು. ಈ ಹರಾಜು ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಬಿಡ್ ಮಾಡಿದ ಅದಾನಿ ಕಂಪನಿ ಮಂಗಳೂರು, ಅಹಮದಾಬಾದ್, ಜೈಪುರ, ತಿರುವನಂತಪುರಂ, ಲಖನೌ ವಿಮಾನ ನಿಲ್ದಾಣವನ್ನು ಪಡೆದುಕೊಂಡಿದೆ.
ದೇಶದ ಆರು ವಿಮಾನ ನಿಲ್ದಾಣಗಳನ್ನು ಖಾಸಗಿ ನಿರ್ವಹಣೆಗೆ ನೀಡುವುದಕ್ಕೆ ಕೇಂದ್ರ ಸರ್ಕಾರ ಟೆಂಡರ್ ಆಹ್ವಾನಿಸಿತ್ತು. ಅದರಲ್ಲಿ ಐದು ವಿಮಾನ ನಿಲ್ದಾಣಗಳ ಗುತ್ತಿಗೆಯನ್ನು ಅದಾನಿ ಗ್ರೂಪ್ ಗೆದ್ದುಕೊಂಡಿದೆ. ಅವು – ಅಹಮದಾಬಾದ್, ತಿರುವನಂತಪುರಂ, ಲಖನೌ, ಮಂಗಳೂರು ಮತ್ತು ಜೈಪುರ ವಿಮಾನ ನಿಲ್ದಾಣ. ಇನ್ನೊಂದು ವಿಮಾನ ನಿಲ್ದಾಣವಾದ ಗುವಾಹಟಿ ಏರ್‌ಪೋರ್ಟ್‌ನ ಟೆಂಡರ್ ಮಂಗಳವಾರ ಅಂತಿಮಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದೀಗ ಬಿಡ್ಡಿಂಗ್ ಗೆದ್ದ ಅದಾನಿ ಕಂಪನಿ, ಮುಂದಿನ 50 ವರ್ಷಗಳ ಕಾಲ ಈ 5 ವಿಮಾನ ನಿಲ್ದಾಣಗಳ ನಿರ್ವಹಣೆ ಮಾಡಲಿದೆ.
ಅದಾನಿ ಕಂಪನಿಗೆ ಬೆಂಗಳೂರು ಮೂಲದ ಜಿಎಂಆರ್ ಗ್ರೂಪ್ ಪ್ರಬಲ ಪೈಪೋಟಿಯನ್ನು ನೀಡಿತ್ತು. ಆದರೆ ಅದಾನಿ ಕಂಪನಿ ಅತಿ ಹೆಚ್ಚು ಮೊತ್ತದ ಬಿಡ್ ಸಲ್ಲಿಸಿದ ಕಾರಣ 6ರ ಪೈಕಿ 5 ನಿಲ್ದಾಣವನ್ನು ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.


