ಮಂಗಳೂರು:ನೂತನ ಮೋಟಾರು ವಾಹನ ತಿದ್ದುಪಡಿ ಕಾಯಿದೆಯ ವಿರುದ್ದ ಪ್ರತಿಭಟನೆ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಮೋಟಾರು ಕಾಯ್ದೆ ಹಾಗೂ ಸುರತ್ಕಲ್ ಅಕ್ರಮ ಟೋಲ್ ಗೇಟ್ ಸಹಿತ ಹೆದ್ದಾರಿ ಸಮಸ್ಯೆಯನ್ನು ಮುಂದಿಟ್ಟು ವಿವಿಧ ಚಾಲಕ, ಸಾರಿಗೆ ಯೂನಿಯನ್‌ಗಳು, ಸಾಮಾಜಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.

ನಗರದ ಮಿನಿ ವಿಧಾನಸೌಧದ ಬಳಿಯಿಂದ ಮೆರವಣಿಗೆಯಲ್ಲಿ ಹೊರಟ ನೂರಾರು ಸಂಖ್ಯೆಯ ವಿವಿಧ ವಿಭಾಗದ ಚಾಲಕರು ಹಾಗೂ ಸಾರ್ವಜನಿಕರು, “ಚಾಲಕ ವರ್ಗದ ಬದುಕನ್ನು ನಾಶ ಮಾಡಿದ ಮಾರಕ ಕಾಯಿದೆ ಬೇಡವೇ ಬೇಡ,ಮಾಡದ ತಪ್ಪಿಗೆ ಜೈಲಿಗೆ ಕಳುಹಿಸುವ ಕೇಂದ್ರದ ನೀತಿಗೆ ಧಿಕ್ಕಾರ,ಕಳಪೆ ರಸ್ತೆಗಳನ್ನು ಮುಂದಿಟ್ಟು ಅಕ್ರಮ ಟೋಲ್ ಸಂಗ್ರಹಿಸುವ ದರೋಡೆ ನೀತಿಗೆ ಧಿಕ್ಕಾರ” ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯೆದುರು ಜಮಾವಣೆಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೇಂದ್ರ ಸರಕಾರವು ಇಡೀ ದೇಶಕ್ಕೆ ಅನ್ವಯವಾಗುವಂತೆ ಏಕಾಏಕಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದೆ. ಚಾಲಕರನ್ನು ದಮನಿಸಲು ಹೊರಟ ಕೇಂದ್ರ ಸರಕಾರವು ಜಾರಿಗೆ ತಂದಿರುವ ಮಾರಕ ಕಾಯಿದೆಯು ದೇಶದ ದುಡಿಯುವ ವರ್ಗದ ಮೇಲೆ ನಡೆಸಿರುವ ತೀವ್ರ ಧಾಳಿಯಾಗಿದೆ.ಯಾವುದೇ ಕಾರಣಕ್ಕೂ ಇಂತಹ ಅಮಾನವೀಯ,ಕ್ರೂರ ಕಾಯಿದೆಗಳನ್ನು ಒಪ್ಪಲು ಸಾದ್ಯವಿಲ್ಲ.ಸಂಘಟಿತ ಹೋರಾಟವೊಂದೇ ಇದಕ್ಕೆ ಉತ್ತರವಾಗಬೇಕು. ಇದರ ಹಿಂದೆ ಕಾರ್ಪೊರೇಟ್ ಶಕ್ತಿಗಳನ್ನು ರಕ್ಷಿಸುವ, ಖಾಸಗೀಕರಣಗೊಳಿಸುವ ಹುನ್ನಾರ ಇದೆ. ನೂತನ ವಾಹನ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಸುರತ್ಕಲ್ ಅಕ್ರಮ ಟೋಲ್ ಗೇಟ್ ಹಲವು ಗಡವುಗಳ ನಂತರವೂ ವಾಹನ ಸವಾರರ ಸುಲಿಗೆಯನ್ನು ಮುಂದುವರಿಸಿದೆ. ಈ ನವೆಂಬರ್‌ನಲ್ಲಿ ಇದರ ಸುಂಕ ಸಂಗ್ರಹದ ಗುತ್ತಿಗೆ ಕೊನೆಗೊಳ್ಳುತ್ತಿದ್ದು ಈಗಲಾದರು ಹೆದ್ದಾರಿ ಪ್ರಾಧಿಕಾರ ಅಕ್ರಮ ಟೋಲ್ ಗೇಟ್ ತೆರವುಗೊಳಿಸುವ ತನ್ನ ತೀರ್ಮಾನವನ್ನು ಜಾರಿಗೊಳಿಸಬೇಕು. ಆ ಮೂಲಕ ಜನಾಗ್ರಹಕ್ಕೆ, ಹೆದ್ದಾರಿ ನಿಯಮಗಳಿಗೆ ಗೌರವ ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆ ಮೊದಲು ಮಿನಿ ವಿಧಾನ ಸೌಧದಿಂದ ಜಿಲ್ಲಾಧಿಕಾರಿ ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾರ್ಮಿಕ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಬೊಂಡಾಲ ಚಿತ್ತ ರಂಜನ್ ಶೆಟ್ಟಿ, ಅಲಿ ಹಸನ್, ದಿನೇಶ್ ಕುಂಪಲ, ಬಿ.ಕೆ.ಇಮ್ತಿಯಾಝ್, ಪ್ರಕಾಶ್ ಡಿಸೋಜ, ಪ್ರಮೋದ್ ಉಳ್ಳಾಲ, ವಿ. ಕುಕ್ಯಾನ್, ಎಚ್.ವಿ.ರಾವ್, ಕೃಷ್ಣಪ್ಪ ಸಾಲ್ಯಾನ್, ಪದ್ಮಾವತಿ ಶೆಟ್ಟಿ, ಸ್ಟೀವನ್ ಡಿಸೋಜ, ಖಾಲಿದ್ ಉಜಿರೆ, ಅಕ್ಷಿತ್ ಸುವರ್ಣ ಮತ್ತಿತರರು ಭಾಗವಹಿಸಿದ್ದರು.