ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ಗೆ ಬೆಂಬಲ: ಮಾಯಾವತಿ

Featured, ರಾಷ್ಟ್ರ ನ್ಯೂಸ್

ನವದೆಹಲಿ: ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆಯು ನಿರ್ಮಾಣವಾಗಿರುವ ಕಾರಣದಿಂದ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಗೆ ಬೆಂಬಲ ನೀಡುವುದಾಗಿ ಬಹುಜನ ಸಮಾಜ ಪಕ್ಷ(ಬಿಎಸ್ ಪಿ) ನಾಯಕಿ ಮಾಯಾವತಿ ಹೇಳಿದ್ದಾರೆ.

ಕಾಂಗ್ರೆಸ್ ನ ಹಲವು ನೀತಿಗಳಿಗೆ ನನ್ನ ಸಹಮತವಿಲ್ಲ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ನಮ್ಮ ಗುರಿ. ಇದರಿಂದಾಗಿ ಮಧ್ಯಪ್ರದೇಶದಲ್ಲಿ ನಾವು ಕಾಂಗ್ರೆಸ್ ಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಮಾಯಾವತಿ ಇಂದು ಬೆಳಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಐದು ರಾಜ್ಯಗಳ ಫಲಿತಾಂಶಗಳು ಬಿಜೆಪಿ ವಿರುದ್ಧದ ಜನಾದೇಶವಾಗಿದೆ. ಅದರಲ್ಲೂ ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಜನತೆ ಬಿಜೆಪಿ ಮತ್ತು ಅದರ ಜನವಿರೋಧಿ ನೀತಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಆದರೆ ಪರ್ಯಾಯ ಆಯ್ಕೆಯಿಲ್ಲದೆ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದಾರೆ ಎಂದು ಬಿಎಸ್ಪಿ ನಾಯಕಿ ನುಡಿದರು.

ರಾಜಸ್ಥಾನದಲ್ಲೂ ನಾವು ಕಾಂಗ್ರೆಸ್ ಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದಲೇ ನಾವು ಈ ಚುನಾವಣೆ ಎದುರಿಸಿದ್ದೇವೆ ಎಂದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಹುಮತದಿಂದ ವಂಚಿತವಾಗಿ 114 ಸ್ಥಾನದೊಂದಿಗೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.ಬಿಎಸ್ ಪಿ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ 109 ಸ್ಥಾನ ಪಡೆದಿದೆ.