ಮಲ್ಪೆ : ಬಂದರಿನೊಳಗೆ 14 ವರ್ಷ ಕೆಳಗಿನ ಮಕ್ಕಳಿಗೆ ಪ್ರವೇಶ ನಿಷಿದ್ದ : ಅಪರ ಜಿಲ್ಲಾಧಿಕಾರಿ -Vishwanews24

Featured, ಉಡುಪಿ

ಉಡುಪಿ: ಮಲ್ಪೆ ಬಂದರು ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಮೀನು ಮಾರಾಟದಲ್ಲಿ ತೊಡಗಿರುವ ದೂರುಗಳುಬಂದಿರುವ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನೊಳಗೆ 14 ವರ್ಷ ಕೆಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಲಾಗುವುದಿಲ್ಲ ಎಂದು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಕ್ಕಳ ರಕ್ಷಣಾ ಘಟಕದ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು.

ಮಲ್ಪೆ ವ್ಯಾಪ್ತಿಯ ಹನುಮಂತನಗರ, ನಿಟ್ಟೂರು ಮತ್ತು ಕೊಳ ಮುಂತಾದ ಕಡೆಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಬೆಳಗ್ಗಿನ ಜಾವ ಮೀನುಗಾರಿಕಾ ಬೋಟುಗಳಲ್ಲಿ ತೆರಳುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮಲ್ಪೆ ಬಂದರಿಗೆ ಪ್ರವೇಶಿಸುವ ನಾಲ್ಕೂ ಗೇಟುಗಳಲ್ಲಿ ಮೀನುಗಾರಿಕಾ ಇಲಾಖೆ, ಮಲ್ಪೆ ಪೋಲೀಸ್, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತೀವೃ ನಿಗಾ ಇಟ್ಟು, ಬಂದರಿನೊಳಗೆ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನೂ ತಪಾಸಣೆಗೊಳಪಡಿಸಿ ಮಕ್ಕಳು ಇಲ್ಲವೆನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಬಂದರು ಪ್ರವೇಶಿಸುವ ಎಲ್ಲಾ ಗೇಟುಗಳಲ್ಲಿಯೂ ಸೆಕ್ಯೂರಿಟಿ ಗಾರ್ಡಗಳನ್ನು ನಿಯೋಜಿಸಬೇಕು ಹಾಗೂ ಹೆತ್ತವರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಮೀನುಗಾರಿಕಾ ಬೋಟುಗಳಲ್ಲಿ ಕಳುಹಿಸಬಾರದು ಎಂದು ಆದೇಶಿಸಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾಡಳಿತದ ಆದೇಶವನ್ನು ಧಿಕ್ಕರಿಸಿ ಮಕ್ಕಳನ್ನು ಬೋಟುಗಳಲ್ಲಿ ಕಳುಹಿಸಿದಲ್ಲಿ ಆ ಮಕ್ಕಳ ಹೆತ್ತವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.