ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರದ ಕಿರು ಪರಿಚಯ -Vishwanews24

Featured, ವಿಶೇಷ ಲೇಖನಗಳು

ತುಳುನಾಡ ಜನರ ಆರಾಧ್ಯ ದೈವ, ಮಕರ ಸಂಕ್ರಮಣ ದಿನದಂದು ವಿಜೃಂಭಣೆಯಿಂದ ಪೂಜೆಗೊಳ್ಳುವ ದೇವ, ಮೂಲೋಕದೊಡತಿ ಮೂಕಾಂಬಿಕೆಯಿಂದ ಮಡಿದು ಭೂಲೋಕದ ದರೆಯಲ್ಲಿ ಕಾರಣೀಕ ದೈವವಾಗಿ ಮಾರಣಕಟ್ಟೆಯ ಧರೆಯಲಿ ನೆಲೆಸಿ ನಿಂದವನೇ ಶ್ರೀ ಬ್ರಹ್ಮಲಿಂಗೇಶ್ವರ ದೇವರು. ಶ್ರೀ ದೇವನು ನೆಲೆಯಾದ ಬಗ್ಗೆ ಪುರಾಣಗಳ ಪ್ರಕಾರ ಪ್ರಚಲಿತವಿರುವ ಕಥೆಯೆಂದರೆ ‘ಮೂಕಾಸುರನೆ’ ಮುಂದೆ ‘ಮೂಕಾಂಬಿಕೆಯಿಂದ’ ಮಡಿದು ‘ಶ್ರೀ ಬ್ರಹ್ಮಲಿಂಗೇಶ್ವರ’ ನಾದನು ಎಂಬುದು.

ಮಾರಣಕಟ್ಟೆ ಕ್ಷೇತ್ರವು ಕೊಲ್ಲೂರಿನಿಂದ ಎಂಟು ಮೈಲಿ ದೂರದಲ್ಲಿ ವಂಡ್ಸೆ ಮಾರ್ಗದಿಂದ ಕುಂದಾಪುರಕ್ಕೆ ಹೋಗುವ ರಸ್ತೆಯಲ್ಲಿ “ಚಿತ್ತೂರು” ಎಂಬ ಸ್ಥಳದಿಂದ ಒಂದು ಮೈಲಿ ದೂರದ ಒಳಹಾದಿಯಲ್ಲಿ ಹೋಗಬೇಕು. ಇಲ್ಲಿ ಪ್ರಕೃತಿ ಸೌಂದರ್ಯವು ಅತ್ಯಂತ ರಮಣೇಯವಗಿದೆ. ದೇವಸ್ಥಾನದ ಸಮೀಪದಲ್ಲಿ “ಬ್ರಹ್ಮಕುಂಡ” ಎಂಬ ಸಣ್ಣ ನದಿಯು ಹರಿಯುತ್ತದೆ. ಭಕ್ತಾದಿಗಳ ಸ್ನಾನ ಸಂಧ್ಯಾವಂದನೆಗಳಿಗೆ ಉಪಯುಕ್ತವಾಗಿದೆ,..

ಪೌರಾಣಿಕ ಹಿನ್ನೆಲೆ:

ಪಶ್ಚಿಮ ಘಟ್ಟದ ತಪ್ಪಲು ಕರಾವಳಿಯ ಪೂರ್ವ ಭಾಗ ಮಲೆನಾಡು-ಮಲೆನಾಡಿಗೆ ಸೇರಿಕೊಂಡ ಪ್ರದೇಶ. ಉತ್ತರ ದಕ್ಷಿಣವಾಗಿ ಹಬ್ಬಿದಂತಹ ದೊಡ್ಡ ಕಾಡು. ಇಲ್ಲಿ ಲೋಕಕಲ್ಯಾಣಕ್ಕೂ, ಸ್ವಯಂ ಶ್ರೇಯಸ್ಸಿಗೂ ತಪಸ್ಸು ಮಾಡುತ್ತಿದ್ದ ಋಷಿಗಳ ವಾಸ ಹಾಗೇ ಈ ದಟ್ಟಾರಣ್ಯದಲ್ಲಿ ಕಂಹಾಸುರ ಎನ್ನುವ ರಾಕ್ಷಸನಿದ್ದನಂತೆ ಆತನು ಕ್ರೂರಿಯು ಆಗಿದ್ದನಂತೆ. ಕೋಲಮುನಿ ಹಾಗೂ ಮೊದಲಾದ ಋಷಿಗಳ ತಪಸ್ಸಿಗೆ ಭಂಗವನ್ನು ತರುತ್ತಿದ್ದ ಕಂಹಾಸುರ ಅಂತೆ ಜನಸಾಮಾನ್ಯರನ್ನು ಪೀಡಿಸುತ್ತಿದ್ದನಂತೆ ಋಷಿಗಳ ಮತ್ತು ಜನಸಾಮಾನ್ಯರ ರೋಧನ ಹಾಗೂ ಪ್ರಾರ್ಥನೆ ಮೂಕಾಂಬಿಕೆಗೆ ಕೇಳಿಸಿತು. ಜಗಜ್ಜನನಿಯಿಂದ ಸಾಂತ್ವಾನ, ಕಂಹಾಸುರನಿಗೆ ದೇವಿಯಿಂದ ಶಿಕ್ಷೆ ಮೂಕನಾದ, ದೇವಿಯ ಭಕ್ತನಾಗಬೇಕೆಂಬ ತುಡಿತದಿಂದ ಭಕ್ತನಾದ.ದೇವಿಯನ್ನು ಸೇರಬೇಕು, ಮೋಕ್ಷ ಪಡೆಯಬೇಕೆಂಬ ಹಂಬಲ , ತಾಯಿಯನ್ನು ಮಹಾತ್ವಾಕಾಂಕ್ಷೆಯಿಂದ ವಿರೋಧಿಸಿ ಕುಕೃತ್ಯ ಎಸಗಿದ. ಕುಪಿತಳಾದ ಮಾತೆ ಬುದ್ಧಿಯ ಮಾತು ಕೇಳದ ಅಸುರನೊಂದಿಗೆ ಮಹಾರಣ. ರಾಕ್ಷಸ ಅಸುನೀಗಿದ ಈ ಸ್ಥಳವೇ ಮಾರಣಕಟ್ಟೆ . ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಶ್ರೀ ಬ್ರಹ್ಮಲಿಂಗೇಶ್ವರನೆಂಬ ನಾಮವನ್ನಿತ್ತು, ಭಕ್ತ ಪೋಷಕನಾಗಿ ಅಭಯದಾತನಾಗುವಂತೆ ಹರಸಿದಳು. ಅಂತಹ ಮಹಾಸ್ಥಳವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಸನ್ನಿಧಿ.

ಮುಂದೆ ಕೊಲ್ಲೂರಿಗೆ ಬಂದ ಶ್ರೀ ಶಂಕರಾಚಾರ್ಯರು ಈ ಕ್ಷೇತ್ರಕ್ಕೆ ಬಂದರು. ಮಹಾ ಪುರುಷರ ಪಾದದೂಳಿಯಿಂದಾಗಿಯೂ, ಪೂಜ್ಯರಿಂದ ಬರೆಯಲ್ಪಟ್ಟ ಶ್ರೀ ಚಕ್ರದಿಂದಾಗಿಯೂ ಮಹಾನ್ ಶಕ್ತಿಯೊಂದಿಗೆ ಪುಣ್ಯಕ್ಷೇತ್ರವಾಗಿ ಭಕ್ತರ ಯಾತ್ರಾ ಸ್ಥಳವಾಯಿತು. ಅಲ್ಲದೇ ಜನಪದಗಳಲ್ಲಿದ್ದಂತೆ ಬಾಯಿಂದ ಬಾಯಿಗೆ ಬಂದ ಜನರ ಮಾತಿನಂತೆ ಚಿತ್ತೂರು ಗುಡಿಕೇರಿ ಸಂಸ್ಥಾನ ಮನೆಯ ಚಂದಯ್ಯ ಶೆಟ್ಟಿ ಯವರ ಮನೆಯಲ್ಲಿ ದನಕಾಯುವ ಮಂಜನು ದನ ಕರುಗಳನ್ನು ಮೇಯಿಸಲು ತನ್ನ ಸಂಗಡಿಗರೊಂದಿಗೆ ಬ್ರಹ್ಮ ಗುಂಡಿಯ ಕಾಡಿನ ಕಡೆಗೆ ಹೋಗುತ್ತಾರೆ. ಆ ದನ ಕರುಗಳ ಗುಂಪಿನಲ್ಲಿ ಕಪಿಲೆಯೆಂಬ ದನವು ಪ್ರತಿ ದಿನ ಬ್ರಹ್ಮ ಗುಂಡಿಯ ಬಳಿ ಬಂದು ಶಿಲೆಯ ಮೇಲೆ ಹಾಲು ಸುರಿದು ಹೋಗುತ್ತಿತ್ತು. ಅದನ್ನು ಒಂದು ದಿನ ದನ ಕಾಯುವ ಮಂಜ ಕಪಿಲೆ ದನ ಹಿಂಡನ್ನು ಬಿಟ್ಟು ಕಾಡಿನ ಒಳಗೆ ಹೋಗುವುದನ್ನು ಹಿಂಬಾಲಿಸಿದ. ಆ ದನವು ಮುಂದೆ ಹೋಗಿ ಬ್ರಹ್ಮ ಗುಂಡಿಯ ಬಳಿ ಇರುವ ಶಿಲೆಯ ಮೇಲೆ ಹಾಲು ಸುರಿಸುತ್ತಿರುವುದನ್ನು ನೋಡಿದನಂತೆ ಆ ವಿಷಯವನ್ನು ಮನೆಗೆ ಬಂದು ತನ್ನ ಮಡದಿ ಮಂಜಿಯಲ್ಲಿ ತಿಳಿಸಿದ.ಈ ವಿಚಾರವನ್ನು ಮನೆಯ ಯಜಮಾನರಾದ ಚಂದಯ್ಯ ಶೆಟ್ಟಿಯವರಿಗೆ ತಿಳಿಸುತ್ತಾರಂತೆ. ಅವರಿಗೆ ಇವರ ಮಾತಿನಿಂದ ನಂಬಿಕೆಬಾರದೇ ಅದನ್ನು ನೋಡಬೇಕೆಂದು ದನ ಕಾಯುವ ಮಂಜನೊಂದಿಗೆ ಒಂದು ದಿನ ಆ ಕಾಡಿಗೆ ಹೋಗಿ ಕಪಿಲೆ ದನವನ್ನು ಹಿಂಬಾಲಿಸಿಕೊಂಡು ಹೋಗುತ್ತಾರಂತೆ ಆ ದನವು ಬ್ರಹ್ಮ ಗುಂಡಿ ಬಳಿ ಇರುವ ಶಿಲೆಯ ಮೇಲೆ ಹಾಲು ಸುರಿಯುದನ್ನು ನೋಡಿದರಂತೆ ಅವನು ಮನೆಗೆ ಹಿಂದಿರುಗಿ ಬಂದ ನಂತರ ಬ್ರಾಹ್ಮಣರನ್ನು ಕರೆಸಿ ಅವರಲ್ಲಿ ಈ ವಿಚಾರವನ್ನು ತಿಳಿಸಿದರಂತೆ ಆಗ ಅವರು ಈ ಶಿಲೆ ಇರುವ ಸ್ಥಳವು ಪ್ರಸಿದ್ಧ ಶಕ್ತಿ ಸ್ಥಳವಾಗಿದ್ದು ಈ ಹಿಂದೆ ಶ್ರೀ ದೇವಿಯು ಕಂಹಾಸುರನನ್ನು ವದಿಸಿ ಮೂಕಾಸುರನಾದಾಗ ಶ್ರೀ ದೇವಿಯಲ್ಲಿ ನಿನ್ನ ಭಕ್ತನಾಗಬೇಕೆಂದು ಹಂಬಲಿಸಿದಾಗ ದೇವಿಯು ತನ್ನ ಭಕ್ತನ ಆಶಯದಂತೆ ಈಶ್ವರ ಶಕ್ತಿಯನ್ನು ನೀಡಿ ಹರಸಿದಳು. ಮುಂದೆ ಈ ಕ್ಷೇತ್ರಕ್ಕೆ ಯತಿನ್ವರನೊಬ್ಬ ಬಂದ ನಂತರ ಈ ಕ್ಷೇತ್ರ ಪ್ರಸಿದ್ಧವಾಗುತ್ತದೆ. ಕಟ್ಟೆಯಲ್ಲಿ ಈಶ್ವರಿ ಶಕ್ತಿಯು ಹೊಂದಿದಂತಹ ಈ ಸ್ಥಳವೇ ಬಹಳ ಶಕ್ತಿಯುತವಾದ ಬ್ರಹ್ಮಲಿಂಗೇಶ್ವರ ಎಂದು ಹೇಳುತ್ತಾರಂತೆ. ನೋವು-ನಲಿವು-ದುಖಃಗಳಿಗೆ ಅಭಯಧಾಮವಾದ ಈ ಕ್ಷೇತ್ರವೇ ಶ್ರೀ ಕ್ಷೇತ್ರ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ.

ಈ ಕ್ಷೇತ್ರದಲ್ಲಿ ಯಕ್ಷೆ, ಚಿಕ್ಕಮ್ಮ, ಹ್ಯಾಗುಳಿ ದೇವರೇ ಮೊದಲಾದ ದೇವತೆಗಳ ಬಳಗವು ಕಂಡುಬರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದಂತೆ ವಾಕ್ಯ ಪ್ರಮಾಣದ ತಿರ್ಪು ಸಿಗುತ್ತದೆ. ಆದ್ದರಿಂದ ಮಂಜುನಾಥನ ಸನ್ನಿಧಿ ತೆಂಕಿನ ದೇವರಾದಂತೆ ಈ ಕ್ಷೇತ್ರವು ಬಡಗಿನ ದೇವರೆಂದು ಕರೆಯಲ್ಪಡುತ್ತದೆ. ಧನು ಸಂಕ್ರಮಣದಂದು ದೊಟ್ಟಿಕಾಲು ಚಿಕ್ಕು ದೇವರ ಪಾತ್ರಿ ಚಕ್ರ ಉಪನದಿಯನ್ನು ದಾಟುವುದು ಅಂತೆಯೇ ತುಳುನಾಡಿನಾದ್ಯಂತ ಭಕ್ತರ ಮನೆಯಲ್ಲಿ ಮೈ ದರ್ಶನ ಮಾಡುವುದು, ದರ್ಶನ ಪಾತ್ರಿ ಮಕರ ಸಂಕ್ರಮಣದಂದು ಶ್ರೀ ಕ್ಷೇತ್ರದಲ್ಲಿ ಹಾಜರಿರುವುದು ಇದರಿಂದ ತುಳು ನಾಡಿಗೂ ಈ ಕ್ಷೇತ್ರಕ್ಕೂ ಇರುವ ಸಂಬಂಧ ಕಂಡುಬರುತ್ತದೆ.
ಪ್ರಾಚೀನತೆಯ ಕುರುಹುವಾಗಿ ಶೇಡಿಮರವೂ ಇದ್ದಿತ್ತು. ಅಂತೇಯೇ ಸನ್ಯಾಸಿ (ಯೋಗಿ)ಯೊಬ್ಬರಿಂದ ಪೂಜಿಸಲ್ಪಡುತ್ತಿತ್ತಂತೆ ಎಂಬುದಕ್ಕೆ ಸಾಕ್ಷಿಯಾಗಿ ಸನ್ಯಾಸಿ ಬೆಟ್ಟು ಎನ್ನುವ ಸ್ಥಳವೂ ಸಮೀಪದಲ್ಲಿದೆ, ಅಂತಹ ಸನ್ಯಾಸಿಗಳು ಪರಿಚಾರಕರಾಗಿದ್ದು ಆದಿ ದ್ರಾವಿಡ ಮೂಲದವರು ಇಂದು ಶ್ರೀ ಕ್ಷೇತ್ರದ ಈಶಾನ್ಯ ದಿಕ್ಕಿನಲ್ಲಿ ಬಂದು ನೆಲೆಸಿದ್ದಾರೆ. ಅವರ ಪೂರ್ವಜರ ಬಾಯಿಯಿಂದ ಬಾಯಿಗೆ ಬಂದ ನಾಡಿಗರ ಮಾತು ಈಗಲೂ ನಾವು ಕೇಳಬಹುದು.

ಈ ಕ್ಷೇತ್ರದಲ್ಲಿ ದೈನಂದಿನ ವಿಧಿ ವಿಧಾನಗಳಿಗೆ ಪೂಜಾ ಅರ್ಚಕ ಕುಟುಂಬ ಮತ್ತು ಇತರ ಕೆಲಸಗಳಿಗೆ ಹೆಬ್ಬಾರರು, ಹುಟ್ಟಿನ ದೇವಾಡಿಗರು, ಮಡಿವಾಳರು, ಮೊಗವೀರರು, ವಿಶ್ವಕರ್ಮರು-ಕ್ಷೌರಿಕ ವರ್ಗದವರು ಇದ್ದಾರೆ. ಪೂರ್ವಕಾಲದಿಂದ ಶ್ರೀ ದೇವರ ಕೈಂಕರ್ಯ ದಲ್ಲಿ ತೊಡಗಿದ ವರ್ಗವಿದೆ. ಆಡಳಿತವನ್ನು ಚಿತ್ತೂರು ಗುಡಿಕೇರಿ ಮನೆಯವರು ಅನುವಂಶಿಕವಾಗಿ ಆಡಳಿತವನ್ನು ನೆಡೆಸುತ್ತಿದ್ದಾರೆ. ತಮ್ಮ ಕುಟುಂಬದ ಆಸ್ಥಿಯಲ್ಲಿ ದೇವಸ್ಥಾನಕ್ಕೆ ಉಂಬಳಿಗಾಗಿ ಬಿಟ್ಟಿರುತ್ತಾರೆ. ಈ ಕ್ಷೇತ್ರದ ದೇವಸ್ಥಾನ ಮತ್ತು ಹೆಬ್ಬಾಗಿಲನ್ನು ಕಟ್ಟುವಾಗ ಗುಡಿಕೇರಿಮನೆಯವರು ಸ್ವಂತ ನಗದು ಹಣ ಕೊರತೆಯಾಗಿ ಹಲ್ಸ್ ನಾಡು ಮನೆಯವರಿಗೆ ಭೂಮಿ ಅಡಮಾನ ಮಾಡಿದ ಲಿಖಿತ ಸರಕಾರಿ ದಾಖಲೆಗಳು ಪುಷ್ಟಿ ನೀಡುತ್ತದೆ. ಈ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಇತರ ಚಿಕ್ಕ- ಪುಟ್ಟ ದೇವಸ್ಥಾನಗಳು ಅಂದರೆ ಕೋಬಿಚಿಕ್ಕು, ವನದುರ್ಗಾದೇವಿ, ಹಿಜಾಣ ಚಿಕ್ಕು, ಕುಂಜ್ಞಾಡಿ ಹೈಗುಳಿ ಮೊದಲಾದ ದೇವತಾಸ್ಥಳಗಳೂ ಇವೆ. ತುಳುವ , ಕೊಂಕಣಿ, ಕನ್ನಡಿಗ, ಮಲೆಯಾಳಿ, ಮರಾಠಿ, ಹಿಂದಿ, ಅನೇಕ ಭಾರತೀಯ ಹಾಗೂ ಎಲ್ಲಾ ಮತಗಳವರ ಅಭಯ ತಾಣವಾಗಿದೆ

ಇಂದಿಗೂ ಸಾವಿರಾರು ಭಕ್ತರು ದೇವರಿಗೆ ಇಷ್ಟವಾದ ಬೆಳಕಿನ ಸೇವೆ, ರಂಗಪೂಜೆ ಮುಂತಾದ ಸೇವೆಗಳ ಮೂಲಕ ಇಷ್ಟಾರ್ಥ ಸಿದ್ದಿಸಿಕೊಳ್ಳುತ್ತಾರೆ. ಪ್ರತಿವರ್ಷವು ಮಕರ ಸಂಕ್ರಮಣದಂದು ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯುತ್ತದೆ.

ಕುಂಭ ಸಂಕ್ರಮಣದಂದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಮ್ಮ ವಾಕ್ ತಿರ್ಮಾನಗಳನ್ನು ದೇವರದರ್ಶನದಲ್ಲಿ ಮಾಡಿಕೊಂಡು ಹೋಗುವುದು ವಿಶೇಷ. ವಶ್ಚಿಕ ಸಂಕ್ರಮಣದ ಮರುದಿನ ದೇವರ ತಾರಂಕುಲಕ್ಕೆ ಅನುಸಾರವಾಗಿ ದೇವಸ್ಥಾನದ ವತಿಯಿಂದ ದಶಾವತಾರ ಯಕ್ಷಗಾನ ಮೇಳ ಪ್ರಾರಂಭವಾಗಿ ಈ ಕ್ಷೇತ್ರದಲ್ಲಿ ಪ್ರಥಮ ಸೇವೆ ನೆಡೆಯುತ್ತದೆ. ಅದರ ಮರುದಿನ ಆಡಳಿತದಾರನ(ಗುಡಿಕೇರಿ) ಮನೆಯಲ್ಲಿ ಸೇವೆ ಆಟ ನೆಡೆಯುವುದು ಸ್ಥಳ ಪದ್ಧತಿ. ವೆಂಕಟರಮಣ ದೇವಸ್ಥಾನದಲ್ಲಿ ಸಿಂಹ ಮಾಸ, ಶುಕ್ಲ ಪಕ್ಷದ ಶ್ರಾವಣ ನಕ್ಷತ್ರದಂದು ಸೌರ ಋಗ್ ಉಪಕರ್ಮ ಆಚರಣೆ ಮಾಡಿ ನಂತರ ಅಲ್ಲಿ ಪೂಜಿಸಲ್ಪಟ್ಟ ಉಪವೀತವನ್ನು ಬ್ರಹ್ಮಲಿಂಗೇಶ್ವರ ದೇವರಿಗೆ ಹಾಕುವುದು ವಾಡಿಕೆ.

ಸೇವೆಗಳು :
ಬ್ರಹ್ಮಲಿಂಗೇಶ್ವರ ಸ್ವಾಮಿಗೆ ರಂಗ ಪೋಜೆಯ ಸೇವೆ, ಸಿಂಗಾರ ಹೋವಿನ ಪೋಜೆ, ಮಂಗಳಾರತಿ, ಹಲವು ಬಗೆಯ ಅಭಿಶೇಕ, ಬಯಲಾಟ- ಯಕ್ಷಗಾನದ ಸೇವೆಯೆಂದರೆ ಬಹಳ ಇಷ್ಟ.

ದೇವರಿಗೆ ಪ್ರಿಯವಾದದ್ದು :
ಸೇವಂತಿಗೆ ಹೂ ಹಾಗು ಗಂಟೆಯ ಸದ್ದು ಈ ದೇವರಿಗೆ ಅಚ್ಚುಮೆಚ್ಚು. ನಂಬಿದವರ ಕೈ ಎಂದೂ ಬಿಡದೆ ಕಾಪಾಡಿ ಸಲಹುವನು ತಂದೆ ಬ್ರಹ್ಮಲಿಂಗೇಶ್ವರ ಸ್ವಾಮಿ ಎಂದು ಇವನ ಭಕ್ತರು ಹೇಳುತ್ತಾರೆ..

ಅಖಂಡ ದೀಪ:ಇವನು ಶ್ರೀ ವಿಷ್ಣುವಿಗೆ ಕೊಟ್ಟ ಅಕಂಡ ದೀಪವು ಇಂದಿಗೂ ಉರಿಯುತ್ತಲೇ ಇದೆ ಎಂದು ನಂಬಿದವರು ಹೇಳುತ್ತಾರೆ.

ಶ್ರೀ ಚಕ್ರ:ಶ್ರೀ ಆದಿ ಶಂಕರಾಚಾರ್ಯರು  ಶ್ರೀ ಮೂಕಾಂಬಿಕಾ ದೇವಿಯ ಇಷ್ಟ ವಿಗ್ರಹವನ್ನು ಪಂಚಲೋಹಗಳಲ್ಲಿ ಪ್ರತಿಷ್ಟಾಪಿಸಿದ ನಂತರ ಮಾರನಕಟ್ಟೆ ಮಾರ್ಗವಾಗಿ ಬಂದು ಬ್ರಹ್ಮಲಿಂಗೇಶ್ವರ ಸನ್ನಿಧಿಯಲ್ಲಿ ಸಹ “ಶ್ರೀ ಚಕ್ರ”ವನ್ನು ಸ್ಥಾಪಿಸಿ ಈ ಕ್ಷೇತ್ರವನ್ನು ಸದಾ ಜಾಗ್ರತಗೊಳಿಸಿದ್ದಾರೆ ಎಂಬ ಪ್ರತೇತಿ ಇದೆ..ಶ್ರೀ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಎಂಬ ಈ ಅಧ್ಯಾಯವು ಮಹಾಭೈರವೀ ಪುರಾಣಾಂತರ್ಗತವಾದುದ್ದು.ದೇವರಿಗೆ ದಶಾವತಾರ ಮೇಳ ಅಂದರೆ ಬಹಳ ಪ್ರೇಮ. ಅಲ್ಲದೇ ರಂಗಪೂಜೆ, ರುದ್ರಾಭಿಷೇಕ, ತುಲಾಭಾರ, ಹೂವಿನ ಪೂಜೆ ಇಲ್ಲಿಯ ವಿಶೇಷ ಪೂಜೆಗಳು.

ಮಾರ್ಗ: 
ಉಡುಪಿ – ಮಾರಣಕಟ್ಟೆ 63 ಕಿ.ಮೀ
ಕುಂದಾಪುರ – ಮಾರಣಕಟ್ಟೆ 24 ಕಿ.ಮೀ
ಕೊಲ್ಲೂರು – ಮಾರಣಕಟ್ಟೆ 18.5 ಕಿ.ಮೀ
ಚಿತ್ತೂರು – ಮಾರಣಕಟ್ಟೆ 1.5 ಕಿ.ಮೀ
ಕುಂದಾಪುರದಿಂದ ಕೊಲ್ಲೂರಿಗೆ ಹೊಗುವ ಮಾರ್ಗ ಮಧ್ಯೆ ಮಾರಣಕಟ್ಟೆ ಕ್ಷೇತ್ರವನ್ನು ಸಂದರ್ಶಿಸಬಹುದಾಗಿದೆ.