ಮಿಣಿ ಮಿಣಿ ಪೌಡರ್ ಹೇಳಿಕೆಯನ್ನು ಬಿಜೆಪಿ ಕಾರ್ಯಕರ್ತರೇ ಟ್ರೋಲ್ ಮಾಡಿದ್ದಾರೆ ,ಇದು ಅವರ ಸಂಸ್ಕೃತಿ : ಕುಮಾರಸ್ವಾಮಿ ಆಕ್ರೋಶ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಮಂಗಳೂರಿನ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಿಣಿ ಮಿಣಿ ಪೌಡರ್ ಉಲ್ಲೇಖ ಮಾಡಿದ್ದ ವಿಡಿಯೋವನ್ನು ಟ್ರೋಲ್ ಮಾಡಿ ವೈರಲ್ ಮಾಡಿರುವುದಕ್ಕೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಮಿಣಿ ಮಿಣಿ ಪೌಡರ್ ಹೇಳಿಕೆಯನ್ನು ಬಿಜೆಪಿ ಕಾರ್ಯಕರ್ತರೇ ಟ್ರೋಲ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಂಗಳೂರು ಬಾಂಬ್ ಪ್ರಕರಣದಲ್ಲಿ ಮಾಧ್ಯಮಗಳ ವರದಿ ಆಧರಿಸಿ ಪಟಾಕಿ ಪೌಡರ್ ಕುರಿತು ನಾನು ಹೇಳಿಕೆ ನೀಡಿದ್ದೆ. ಈ ಪ್ರಕರಣದಲ್ಲಿ ಕೆಲವು ಹಿರಿಯ ಅಧಿಕಾರಿಗಳೇ ಮಾಧ್ಯಮಗಳ ದಾರಿ ತಪ್ಪಿಸಿದರು. ಸರ್ಕಾರ ಎಲ್ಲಿ ಬಿಗಿ ಮಾಡಬೇಕಿತ್ತೋ ಅಲ್ಲಿ ಮಾಡಲಿಲ್ಲ. ಪ್ರಕರಣದಲ್ಲಿ ಸರ್ಕಾರ, ಪೊಲೀಸರ ಲೋಪ ಮುಚ್ಚಿಕೊಳ್ಳಲು ಇಂತಹದ್ದಕ್ಕೆ ಪ್ರಚಾರ ನೀಡಲಾಯಿತು. ನಾನು ಕಥೆ ಕಟ್ಟಿಲ್ಲ. ಮಾಧ್ಯಮ ವರದಿ ಆಧರಿಸಿ ಹೇಳಿಕೆ ಕೊಟ್ಟಿದ್ದೇನೆ. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ ಎಂದರು.

ಮಿಣಿ ಮಿಣಿ ಪೌಡರ್ ಹೇಳಿಕೆಯನ್ನು ಟ್ರೋಲ್ ಮಾಡಿರುವುದು ವಿಕೃತ ಮನೋಭಾವ. ಈ ಮೂಲಕ ಅವರಲ್ಲಿರುವ ಆಲೋಚನೆಗಳು ವ್ಯಕ್ತವಾಗುತ್ತಿದೆ. ನಾನು ಜೀವನದಲ್ಲಿ ತಪ್ಪು ಮಾಡಿಲ್ಲ. ತಪ್ಪು ಮಾಡಿದರೆ ಮುಕ್ತವಾಗಿ ಹೇಳುತ್ತೇನೆ. ನನ್ನ ಬಗ್ಗೆ ಕೀಳಾಗಿ ಟ್ರೋಲ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಇದು ಬಿಜೆಪಿ ಸಂಸ್ಕೃತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೊಡ್ಡ‌ ಕಂಟೈನರ್‌ನಲ್ಲಿ ಬಾಂಬ್ ಇದೆ. ಸಾವಿರಾರು ಜನ ಸಾಯುತ್ತಾರೆ ಎಂದಿದ್ದರು. ಒಂದು ಸಮಾಜದ ಬಗ್ಗೆ ದೋಷ ತೋರಿಸಬೇಕು ಎನ್ನುವುದು ಅವರ ಮನಸ್ಸಿನಲ್ಲಿ ಇತ್ತು. ಈಗ ತಾವೇ ಎಕ್ಸ್‌ಪೋಸ್ ಆಗಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಈ ಕಥೆಗಳನ್ನು ಕಟ್ಟುತ್ತಿದ್ದಾರೆ ಎಂದು ದೂರಿದರು.