ಮೀನುಗಾರ ಮಹಿಳೆಯರಿಂದ ಸಾಲ ಮರುಪಾವತಿಗೆ ಒತ್ತಾಯಿಸದಂತೆ ಬ್ಯಾಂಕ್ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ -Vishwanews24
ಉಡುಪಿ: ಸಾಲಮನ್ನಾ ಫಲಾನುಭವಿ ಮೀನುಗಾರ ಮಹಿಳೆಯರಿಂದ ಸಾಲ ಮರುಪಾವತಿಗೆ ಒತ್ತಾಯಿಸದಂತೆ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಸೂಚಿಸಲಾಗಿದ್ದು, ಬ್ಯಾಂಕ್ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿದ್ದಾರೆ.
ಮೀನುಗಾರ ಮಹಿಳೆಯರು ಈ ಬಗ್ಗೆ ಆತಂಕ, ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಮುಜರಾಯಿ ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಮೀನುಗಾರ ಮಹಿಳೆಯರ ಹಿತಾಸಕ್ತಿ ಗಮನದಲ್ಲಿರಿಸಿ ರಾಜ್ಯ ಸರ್ಕಾರ, ಶಾಸಕರ ಮನವಿ ಮೇರೆಗೆ ಕರಾವಳಿ ಮೂರು ಜಿಲ್ಲೆಯ 23 ಸಾವಿರ ಮಹಿಳಾ ಮೀನುಗಾರರ 62 ಕೋಟಿ ರೂ. ಸಾಲಮನ್ನಾ ಘೋಷಣೆ ಮಾಡಿತ್ತು. ಅದರ ಪ್ರಕ್ರಿಯೆ ನಡೆಯುತ್ತಿದೆ.
ಈ ನಡುವೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಮಹಿಳೆಯರು ಸಾಲ ಪಾವತಿಸಬೇಕೆಂದು ಒತ್ತಾಯಿಸಿದ್ದು, ಕಟ್ಟದಿದ್ದರೆ ಸುಸ್ತಿ ಸಾಲಗಾರರಾಗುತ್ತೀರಿ. ಮುಂದೆ ಯಾವ ಸಾಲ ಸಿಗುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಈ ಹಿಂದೆ ಸಾಲ ಮರುಪಾವತಿಸಲು ಒತ್ತಡ ಹಾಕದಂತೆ ಬ್ಯಾಂಕ್‌ಗಳಿಗೆ ಸರ್ಕಾರ ಸೂಚಿಸಿದ್ದರೂ ಮತ್ತೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಗುರುವಾರ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಸಾಲಮನ್ನಾ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ನಡೆಯುತ್ತಿದೆ, ಇದಕ್ಕೆ ಕೆಲ ಸಮಯ ಬೇಕಾಗಿದ್ದು, ಶೀಘ್ರ ಸಾಲಮನ್ನಾ ಆಗಲಿದೆ ಎಂದರು.
