ಮುಂದಿನ ಅವಧಿಯಲ್ಲಿ ಟೀಂ ಇಂಡಿಯಾದ ಕೋಚ್ ಆಗುವ ಆಸೆಯಿದೆ : ಸೌರವ್ ಗಂಗೂಲಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗುವ ಇಚ್ಛೆಯಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ತಾವು ಖಂಡಿತಾ ತಂಡದ ಕೋಚ್ ಆಗಲು ಬಯಸುತ್ತೇನೆ ಎಂದಿದ್ದಾರೆ. ಸದ್ಯ ಕೋಚ್ ಪದವಿ ಪಡೆಯಲು ಸಾಧ್ಯವಿಲ್ಲ, ಆದರೆ ಮುಂದಿನ ಅವಧಿಯಲ್ಲಿ ತಂಡ ಕೋಚ್ ಆಗಲು ಇಷ್ಟಪಡುತ್ತೇನೆ , ಮುಂದೊಂದು ದಿನ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಿದ್ದೇನೆ’ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸದ್ಯ ಗಂಗೂಲಿ ಅವರು ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ (ಸಿಎಬಿ) ಅಧ್ಯಕ್ಷರಾಗಿದ್ದಾರೆ. ಅಲ್ಲದೆ, ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಸಲಹೆಗಾರರೂ ಆಗಿದ್ದಾರೆ. ಕ್ರಿಕೆಟ್ ಕಾಮೆಂಟರಿ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ಅವರು ಬಂಗಾಳಿ ಕ್ವಿಜ್ ಕಾರ್ಯಕ್ರಮವೊಂದನ್ನೂ ನಡೆಸಿಕೊಡುತ್ತಿದ್ದಾರೆ.

ಟೀಂ ಇಂಡಿಯಾದ ಪ್ರಮುಖ ಯಶಸ್ವಿ ನಾಯಕರಲ್ಲೊಬ್ಬರಾಗಿರುವ ಗಂಗೂಲಿ ಕ್ರಿಕೆಟ್ ಸಲಹಾ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೇ ಸಮಿತಿ ರವಿ ಶಾಸ್ತ್ರಿ ಅವರನ್ನು ಟೀಂ ಇಂಡಿಯಾದ ಕೋಚ್ ಆಗಿ ಆಯ್ಕೆ ಮಾಡಿತ್ತು.

ವೆಸ್ಟ್ ಇಂಡೀಸ್‌ ವಿರುದ್ಧದ ಸರಣಿಯ ನಂತರ ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಇತ್ತೀಚೆಗೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕೋಚ್ ಹುದ್ದೆಗೆ ಅರ್ಜಿ ಕರೆದಿತ್ತು.