ಮುಸ್ಲಿಮರ ಮೀಸಲಾತಿ ರದ್ದು – ಬಿಜೆಪಿಯಿಂದ ದ್ವೇಷದ ರಾಜಕಾರಣ: ಸಿದ್ದರಾಮಯ್ಯ ಆಕ್ರೋಶ – Vishwanews24
ಮುಸ್ಲಿಮರ ಮೀಸಲಾತಿ ರದ್ದು – ಬಿಜೆಪಿಯಿಂದ ದ್ವೇಷದ ರಾಜಕಾರಣ: ಸಿದ್ದರಾಮಯ್ಯ ಆಕ್ರೋಶ
ಬೆಂಗಳೂರು: ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಡಿಯಲ್ಲಿದ್ದ ಮುಸ್ಲಿಮರ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅಂಕಿ ಅಂಶಗಳನ್ನು ಇಟ್ಟುಕೊಂಡು ಆಕ್ರೋಶ ಹೊರಹಾಕಿದ್ದಾರೆ. ಮುಸ್ಲಿಂಮರ ಮೀಸಲಾತಿ ರದ್ದುಗೊಳಿಸಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಕಿಡಿ ಕಾರಿರುವ ಸಿದ್ದರಾಮಯ್ಯ ಅವರು, “ಜಾತಿ-ಧರ್ಮಗಳ ನಡುವೆ ಜಗಳ ಹಚ್ಚಿ ಚುನಾವಣೆಯಲ್ಲಿ ಲಾಭ ಗಳಿಸುವ ದುರುದ್ದೇಶದ, ತಪ್ಪು ಮಾಹಿತಿ ಆಧರಿಸಿದ ಮತ್ತು ಸಂವಿಧಾನ ವಿರೋಧಿಯಾದ ಪರಿಷ್ಕೃತ ಮೀಸಲಾತಿಯನ್ನು ಪ್ರಕಟಿಸಿರುವ ರಾಜ್ಯ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು. ಚುನಾವಣೆ ಘೋಷಣೆಗೆ ದಿನ ಎಣಿಕೆ ನಡೆಯುತ್ತಿರುವಾಗ ಅವಸರದಲ್ಲಿ ಪ್ರಕಟಿಸಲಾಗಿರುವ ಮೀಸಲಾತಿ ನೀತಿ ದೋಷಪೂರ್ಣವಾಗಿದೆ” ಎಂದಿದ್ದಾರೆ.
“ಮೀಸಲಾತಿ ನೀತಿ ದೋಷಪೂರ್ಣವಾಗಿದ್ದು, ಅನುಷ್ಠಾನಗೊಳಿಸಲು ಸಮಯವಕಾಶವೇ ಇಲ್ಲ. ವಿಶ್ವಾಸಾರ್ಹ ಮಾಹಿತಿ ಇಲ್ಲದ ಈ ಮೀಸಲಾತಿ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ರದ್ದಾಗುವುದು ಖಂಡಿತ. ಅವಕಾಶ ವಂಚಿತರಿಗೆ ವಿಶೇಷ ಸವಲತ್ತು ನೀಡಿ, ಅವರನ್ನು ಕೂಡ ಮುಖ್ಯವಾಹಿನಿಗೆ ತರಬೇಕು ಎನ್ನುವುದು ಸಂವಿಧಾನದ 14ನೇ ಪರಿಚ್ಛೇದದ ಆಶಯವಾಗಿದೆ. 15 ಮತ್ತು 16ನೇ ಪರಿಚ್ಛೇದವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದೆ. ಪರಿಷ್ಕೃತ ಮೀಸಲಾತಿ ನೀತಿ ಇದಕ್ಕೆ ವಿರುದ್ಧವಾಗಿದೆ” ಎಂದು ತಿಳಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಜೆಡಿಎಸ್ನ ಗುಬ್ಬಿ ಶ್ರೀನಿವಾಸ್ – Vishwanews24
“ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಬಾಬಾ ಸಾಹೇಬರು ಹೇಳಿದ್ದಾರೆ. ಜಾತಿ ವ್ಯವಸ್ಥೆ ಇರುವುದರಿಂದಲೇ ಅಸಮಾನತೆ ನಿರ್ಮಾಣವಾಗಿರುವುದು. ಇನ್ನೂ ಎಷ್ಟು ಕಾಲ ಮೀಸಲಾತಿ ಪದ್ಧತಿ ಇರಬೇಕು ಎಂದು ವ್ಯಂಗ್ಯವಾಡುವವರು ಇದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಬಿಜೆಪಿ ಸರ್ಕಾರವನ್ನು ತಿವಿದಿದ್ದಾರೆ.
“1995ರಿಂದ ಮುಸ್ಲಿಮರಿಗೆ ರಾಜ್ಯದಲ್ಲಿ ನೀಡುತ್ತಿದ್ದ ಮೀಸಲಾತಿಯನ್ನು ಈಗ ತೆಗೆದುಹಾಕಲು ಕಾರಣವೇನು? ಅವರನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಸ್ಲಿಮರಲ್ಲಿ ಯರಾದರೂ ಬದಲಾವಣೆ ಕೇಳಿದ್ದಾರಾ?. ಎಸ್ ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳಕ್ಕಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅದು 2020ರಲ್ಲಿ ವರದಿ ನೀಡಿತ್ತು, ವರದಿ ಬಂದು 3 ವರ್ಷ ಕಳೆದರೂ ನಿದ್ದೆ ಮಾಡುತ್ತಿದ್ದ ರಾಜ್ಯ ಸರ್ಕಾರ ಈಗ ಎದ್ದು ಕೂತಿದೆ” ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ 3 ದಿನ ಗುಡುಗು ಸಹಿತ ಮಳೆ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ – Vishwanews24
