ಮೂಳೂರು: ಬಿಲ್ಲವ ಸಮಾಜದ ಗುರಿಕಾರ, ದೈವಾರಾಧಕ ಸುಭಾಶ್ಚಂದ್ರ ಪೂಜಾರಿ ಬಾವಿಗೆ ಹಾರಿ ಆತ್ಮಹತ್ಯೆ : vishwanews24
ಮೂಳೂರು: ಬಿಲ್ಲವ ಸಮಾಜದ ಗುರಿಕಾರ, ದೈವಾರಾಧಕ ಸುಭಾಶ್ಚಂದ್ರ ಪೂಜಾರಿ ಬಾವಿಗೆ ಹಾರಿ ಆತ್ಮಹತ್ಯೆ
ಮೂಳೂರು: ವ್ಯಕ್ತಿಯೋರ್ವರು ತಮ್ಮ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡವರು ಮೂಳೂರು ರಾಜಮನೆ ನಿವಾಸಿ ಸುಭಾಷ್ ಚಂದ್ರ ಪೂಜಾರಿ(68).ಈ ಭಾಗದ ಬಿಲ್ಲವ ಸಮಾಜದ ಒಂದನೇ ಗುರಿಕಾರರಾಗಿದ್ದು,ಕುಟುಂಬದ ದೈವದ ಆರಾಧಕರಾಗಿ ಸೇವೆ ನಡೆಸುತ್ತಿದ್ದ ಇವರು ಪಿಗ್ಮಿ ಸಂಗ್ರಹ ವೃತ್ತಿ ನಡೆಸಿ ಜೀವನ ಸಾಗಿಸುತ್ತಿದ್ದರು.
ಕಳೆದ ಕೆಲ ದಿನಗಳಿಂದ ಕೈ ನಡುಕ ಸಮಸ್ಯೆ ಅವರನ್ನು ಬಾಧಿಸುತ್ತಿದ್ದು ಪಿಗ್ಗಿ ಸಂಗ್ರಹ ವೃತ್ತಿಗೂ ಅಡಚಣೆಯಾಗಿತ್ತು. ಕೆಲವು ದಿನಗಳ ಹಿಂದೆ ಇವರ ಸ್ಕೂಟರ್ ಗೆ ಮತ್ತೊಂದು ದ್ವಿಚಕ್ರವಾಹನ ಡಿಕ್ಕಿಯಾದ ಪರಿಣಾಮ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದರು.
ಬುಧವಾರ ಮುಂಜಾನೆ ನಾಲ್ಕರ ಸುಮಾರಿಗೆ ನಿತ್ಯದಂತೆ ಮನೆಯಿಂದ ಹೊರ ಹೋಗಿದ್ದ ಇವರು ವಾಕಿಂಗ್ ಗೆ ಹೋಗಿರಬಹುದೆಂದು ಮನೆಮಂದಿ ತಿಳಿದಿದ್ದರು. ಸಮಯ ಮೀರಿದರೂ ಬಾರದಿದ್ದಾಗ ಹುಡುಕಾಟ ನಡೆಸಿದ್ದು, ಬಿಲ್ಲವ ಸಂಘದ ಮುಂಭಾಗದ ಜಾಗದಲ್ಲಿದ್ದ ಬಾವಿಯ ಸಮೀಪ ಚಪ್ಪಲಿ ಪತ್ತೆಯಾಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಬಂದ ಕಾಪು ಪೊಲೀಸರು ಸಾರ್ವಜನಿಕರ ನೆರವಿನಿಂದ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ಅಂತ್ಯಕ್ರಿಯೆ ಬುಧವಾರ ಸಂಜೆ ಮೂರು ಗಂಟೆಗೆ ಸ್ವಗೃಹ ರಾಜಮನೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
