ಮೋದಿ ಸಾರ್ವಜನಿಕ ಜೀವನಕ್ಕೆ 25 ವರ್ಷ: ಸೆ.17ರಿಂದ ಬಿಜೆಪಿಯ ಸಂಕಲ್ಪ ಸೇವಾ ಅಭಿಯಾನ – vishwanews24
ಮೋದಿ ಸಾರ್ವಜನಿಕ ಜೀವನಕ್ಕೆ 25 ವರ್ಷ: ಸೆ.17ರಿಂದ ಬಿಜೆಪಿಯ ಸಂಕಲ್ಪ ಸೇವಾ ಅಭಿಯಾನ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನಕ್ಕೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ದೇಶಾದ್ಯಂತ ಸಂಕಲ್ಪ ಸೇವಾ ಅಭಿಯಾನ ಹಮ್ಮಿಕೊಳ್ಳಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಜನಸೇವೆಯ ಪಯಣ ನಿರಂತರವಾಗಿ ಮುಂದುವರಿದಿದ್ದು, ಸಂಕಲ್ಪದಿಂದ ಸಿದ್ಧಿಯತ್ತ ಸಾಗಿದೆ. ಮೋದಿ ಅವರ ಸಾರ್ವಜನಿಕ ಬದುಕಿನ 25 ವರ್ಷಗಳು ದೇಶಸೇವೆ ಹಾಗೂ ಅಭಿವೃದ್ಧಿಗೆ ಸಮರ್ಪಿತವಾಗಿದ್ದು ಅವರ ನಾಯಕತ್ವದಲ್ಲಿ ದೇಶದಲ್ಲಿ ವ್ಯಾಪಕ ಬದಲಾವಣೆಗಳಾಗಿವೆ ಎಂದು ಹೇಳಿದರು.
ಇದನ್ನೂ ಓದಿ:
ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಸರ್ಕಾರ ರಚನೆಯಾದ ಸಂದರ್ಭದಲ್ಲಿ ದೇಶದಲ್ಲಿ ಕತ್ತಲೆಯ ವಾತಾವರಣ ಇತ್ತು. ಮೋದಿ ಸರ್ಕಾರದ ಅವಧಿಯಲ್ಲಿ ಸುಮಾರು 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರಗೆ ತರಲಾಗಿದೆ. ಸಾಮಾನ್ಯ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಬಡವರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಅವರ ದೃಷ್ಟಿಕೋನ ಸ್ಪಷ್ಟವಾಗಿದ್ದು, ಅವರ ನಾಯಕತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ವಿಶ್ವಾಸಾರ್ಹತೆ ಹಾಗೂ ಗೌರವ ಹೆಚ್ಚಾಗಿದೆ. ವಿಶ್ವದಲ್ಲಿ ಭಾರತದ ಪ್ರಭಾವ ಮತ್ತು ಗೌರವ ಹೆಚ್ಚಿದ್ದು, ಇಂದು ಪ್ರತಿಯೊಬ್ಬ ಭಾರತೀಯನೂ ಹಿಂದಿಗಿಂತ ಹೆಚ್ಚು ಸುರಕ್ಷಿತವಾಗಿದ್ದೇನೆ ಎಂಬ ಭಾವನೆ ಹೊಂದಿದ್ದಾನೆ ಎಂದು ನಿತಿನ್ ನವೀನ್ ಹೇಳಿದರು.
ದೇಶ ಈಗ ಸಂಪೂರ್ಣವಾಗಿ ನಕ್ಸಲ್ವಾದದಿಂದ ಮುಕ್ತವಾಗಿದೆ. ಮೋದಿ ಅವರ ಸಾರ್ವಜನಿಕ ಬದುಕಿನ ಈ ಮೈಲುಗಲ್ಲನ್ನು ಗುರುತಿಸುವ ಉದ್ದೇಶದಿಂದ ಬಿಜೆಪಿ ಸಂಕಲ್ಪ ಸೇವಾ ಅಭಿಯಾನದಡಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ:
ಮೈಶುಗರ್ ಕಾರ್ಖಾನೆ ಬಾಯ್ಲರ್ಗೆ ಬಿದ್ದು ಕಾರ್ಮಿಕ ದುರ್ಮರಣ – vishwanews24
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್ 17ನ್ನು ಬಿಜೆಪಿ ಸೇವಾ ದಿನವಾಗಿ ಆಚರಿಸಲಿದೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಪ್ರಧಾನಿಗೆ ಕೃತಜ್ಞತೆ ಸಲ್ಲಿಸುವುದರ ಜತೆಗೆ ವಿವಿಧ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 17ರ ಸಂಜೆ 7 ಗಂಟೆಗೆ ದೀಪ ಬೆಳಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ವಾರಾಣಸಿಯಿಂದ ವಡನಗರದವರೆಗೆ ಸೇವಾ ಅಭಿಯಾನ ನಡೆಯಲಿದೆ. ಈ ಸೇವಾ ಅಭಿಯಾನ ಸುಮಾರು 20 ದಿನಗಳ ಕಾಲ ನಡೆಯಲಿದ್ದು, ಪ್ರತಿದಿನ 5ರಿಂದ 7 ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ಯೋಜಿಸಿದೆ. ಈ ಸೇವಾ ಯಾತ್ರೆ ದೇಶದ 10 ರಾಜ್ಯಗಳ ಮೂಲಕ ಸಾಗಲಿದೆ ಎಂದು ಪಕ್ಷ ತಿಳಿಸಿದೆ.
ಅಭಿಯಾನದ ಭಾಗವಾಗಿ ಅಕ್ಟೋಬರ್ 2ರಂದು ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನದ ಅಂಗವಾಗಿ ಸ್ವಚ್ಛತೆ ಹಾಗೂ ಸಾಮಾಜಿಕ ಸೇವೆಗೆ ಒತ್ತು ನೀಡಲಾಗುತ್ತದೆ. ಇದೇ ವೇಳೆ ಅಕ್ಟೋಬರ್ 7ರಂದು ‘ಜ್ಯೋತಿ ಕಲಶ ಯಾತ್ರೆ’ ಆಯೋಜಿಸಲಾಗುತ್ತದೆ. ವಿವಿಧ ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳ ಮೂಲಕ ಜನರೊಂದಿಗೆ ಸಂಪರ್ಕ ಸಾಧಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ.
ಇದನ್ನೂ ಓದಿ:
ಪುತ್ತೂರು : ವಿದ್ಯಾರ್ಥಿನಿಲಯದಲ್ಲಿ ಬಟ್ಟೆ ಕಳ್ಳತನ ಪ್ರಕರಣ; ಆರೋಪಿ ಬಂಧನ – vishwanews24
ಅಭಿಯಾನದ ಮತ್ತೊಂದು ಪ್ರಮುಖ ಕಾರ್ಯಕ್ರಮವಾಗಿ ಅಕ್ಟೋಬರ್ 17ರಂದು ಜನಪ್ರತಿನಿಧಿಗಳ ಸನ್ಮಾನ ನಡೆಯಲಿದೆ. ಪಂಚಾಯಿತಿ ಮಟ್ಟದಿಂದ ಸಂಸದರ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸುತ್ತಿರುವ ಜನಪ್ರತಿನಿಧಿಗಳನ್ನು ಗೌರವಿಸುವ ಯೋಜನೆಯನ್ನು ಬಿಜೆಪಿ ರೂಪಿಸಿದೆ.
