ಯಾರನ್ನೋ ಮೆಚ್ಚಿಸಲು ಸರಕಾರ ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿದ್ದು, ಜನರ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ರಾಜ್ಯದ ಬಿಜೆಪಿ ಸರಕಾರ ನಡೆಸುತ್ತಿದೆ : ವಿನಯ್ ಕುಮಾರ್ ಸೊರಕೆ ಆಕ್ರೋಶ -Vishwanews24

Featured

ಉಡುಪಿ : ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಜ್ಯದಾದ್ಯಂತ 144 ಸೆಕ್ಷನ್ ವಿಧಿಸಿ, ಯಾರನ್ನೋ ಮೆಚ್ಚಿಸಲು ಸರಕಾರ ಮಂಗಳೂರಿನಲ್ಲಿ ಗೋಲಿಬಾರ್ ನಡೆಸಿದ್ದು,  ಇದರಿಂದ ಪ್ರತಿಭಟನೆ ಮಾಡುವ ಜನರ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ರಾಜ್ಯದ ಬಿಜೆಪಿ ಸರಕಾರ ನಡೆಸುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಈ ಕಾಯ್ದೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ, ನಾವು ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರವು ಕೇವಲ ಕೆಲ ವರ್ಗ, ಧರ್ಮದವರನ್ನು ಗುರಿಯಾಗಿಸಬಾರದು ಎಲ್ಲ ವರ್ಗ, ಜಾತಿ, ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು

ಮಂಗಳೂರಿನಲ್ಲಿ ಏಕಾಏಕಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಅಕ್ಷಮ್ಯ. ಎಲ್ಲಿಯೂ ತೀವ್ರವಾದ ಪ್ರತಿಭಟನೆಗಳು ನಡೆದಿರಲಿಲ್ಲ. ಕಾನೂನಿಗೆ ಧಕ್ಕೆಯಾಗುವಂತಹ ಸನ್ನಿವೇಶಗಳು ನಿರ್ಮಾಣವಾಗಿರಲಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಲ್ಲದೆ ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಅಮಾಯಕರು ಸಾವನಪ್ಪಿದ್ದಾರೆ. ಮಂಗಳೂರು ಪೊಲೀಸರ ವರ್ತನೆ ಖಂಡನೀಯ ಈ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಾಯಕರಾದ ಕಿಶನ್ ಹೆಗ್ಡೆ ಕೊಳಕೆಬೈಲು, ಹರೀಶ್ ಕಿಣಿ, ನರಸಿಂಹ ಮೂರ್ತಿ, ಭಾಸ್ಕರ್ ರಾವ್ ಕಿದಿಯೂರು ಹಾಗೂ ಇತರರು ಉಪಸ್ಥಿತರಿದ್ದರು