ಯಾವುದೇ ಕಾರಣಕ್ಕೂ ದ್ವೇಷ ರಾಜಕಾರಣ ಮಾಡುವುದಿಲ್ಲ. ಈ ಬಗ್ಗೆ ನಾಡಿನ ಜನರಿಗೆ, ಪ್ರತಿಪಕ್ಷಗಳಿಗೆ ಭರವಸೆ ಕೊಡುತ್ತೇನೆ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ನಾನು ಯಾವುದೇ ಕಾರಣಕ್ಕೂ ದ್ವೇಷ ರಾಜಕಾರಣ ಮಾಡುವುದಿಲ್ಲ. ಈ ಬಗ್ಗೆ ನಾಡಿನ ಜನರಿಗೆ, ಪ್ರತಿಪಕ್ಷಗಳಿಗೆ ಭರವಸೆ ಕೊಡುತ್ತೇನೆ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮುಖ್ಯ ಕಾರ್ಯದರ್ಶಿಯೊಂದಿಗೆ ಸಂಪುಟ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಯಾರೇ ದ್ವೇಷದ ರಾಜಕಾರಣ ಮಾಡಿದ್ದರೂ ನಾನು ಅದೆಲ್ಲವನ್ನು ಮರೆತು, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ. ಅಭಿವೃದ್ಧಿಯೆಡೆಗೆ ಮಾತ್ರ ನನ್ನ ಗಮನ. ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಅದನ್ನು ಸರಿದಾರಿಗೆ ತರುವ ಮೂಲಕ ಹಿಂದಿನ 14 ತಿಂಗಳ ಸರ್ಕಾರಕ್ಕೂ ನಮ್ಮ ಸರ್ಕಾರಕ್ಕೂ ಏನು ವ್ಯತ್ಯಾಸ ಎಂಬುದನ್ನು ನಾಲ್ಕೈದು ತಿಂಗಳಲ್ಲಿ ಮಾಡಿ ತೋರಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡು ತ್ತೇವೆ ಎಂದರು.

ಬರಗಾಲದಿಂದ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ರಾಜ್ಯದ ರೈತರಿಗೆ ನನ್ನ ಮೊದಲ ಆದ್ಯತೆ. ನೇಕಾರರು, ಮೀನುಗಾರರು, ಕೃಷಿ ಕಾರ್ವಿುಕರ ಸಂಕಷ್ಟಕ್ಕೆ ಸ್ಪಂದಿಸಲು ವಿಶೇಷ ಗಮನ ಕೊಡುತ್ತೇನೆ ಎಂದು ಹೇಳಿದರು.

“ಜುಲೈ 29ರಂದು ವಿಧಾನ ಮಂಡಲ ಅಧಿವೇಶನ ಕರೆಯಲು ತೀರ್ಮಾನ ಮಾಡಿದ್ದೇವೆ. ಅಂದು ಬೆಳಗ್ಗೆ 10 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ಅಂದು ವಿಶ್ವಾಸಮತ ಸಾಬೀತು ಮಾಡುತ್ತೇವೆ” ಎಂದು ತಿಳಿಸಿದರು. ಜುಲೈ 29ರಂದು ಸೋಮವಾರ ವಿಧಾನ ಮಂಡಲದ ಕಲಾಪ ನಡೆಸುತ್ತೇವೆ. ರೈತರ ಸಾಲಮನ್ನಾ ಬಗ್ಗೆ ಮಾಹಿತಿ ಪಡೆದು ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇನೆ” ಎಂದು ಸ್ಪಷ್ಟಪಡಿಸಿದರು

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬಡರೈತರಿಗೆ ಆರು ಸಾವಿರ ರೂ.ಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ. ಇದರ ಜತೆಗೆ ರಾಜ್ಯ ಸರ್ಕಾರದಿಂದ ಎರಡು ಕಂತುಗಳಲ್ಲಿ 4 ಸಾವಿರ ನೀಡಲು ತೀರ್ವನಿಸಲಾಗಿದೆ ಎಂದು ಹೇಳಿದರು.