ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬ ಸಾಧ್ಯತೆ: ಕರಾವಳಿಯಲ್ಲಿ ಮತ್ತೆ ಬಿಸಿಲು – vishwanews24

Featured, ದಕ್ಷಿಣ ಕನ್ನಡ

ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬ ಸಾಧ್ಯತೆ: ಕರಾವಳಿಯಲ್ಲಿ ಮತ್ತೆ ಬಿಸಿಲು

ಮಂಗಳೂರು : ಕರ್ನಾಟಕಕ್ಕೆ ಮುಂಗಾರು ಮಾರುತಗಳ ಪ್ರವೇಶ ಕೊಂಚ ವಿಳಂಬವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಪೂರ್ವ ಮುಂಗಾರು ಮಳೆ ಸ್ವಲ್ಪ ಮಟ್ಟಿಗೆ ಸುರಿದಿತ್ತಾದರೂ, ಈಗ ಮತ್ತೆ ಎಲ್ಲೆಡೆ ಬಿಸಿಲಿನ ವಾತಾವರಣ ತೀವ್ರಗೊಂಡಿದೆ. ಇನ್ನು ಒಂದು ವಾರದ ಬಳಿಕ ಕರಾವಳಿ ಕಡೆಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದ್ದು, ಆರಂಭದಲ್ಲಿ ಮಳೆಯ ಅಬ್ಬರ ಅಷ್ಟಾಗಿ ಇರುವುದಿಲ್ಲ ಎನ್ನಲಾಗಿದೆ.

ಸಾಮಾನ್ಯವಾಗಿ ಮೇ ಕೊನೆಯ ವಾರದಲ್ಲಿ ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶಿಸುತ್ತದೆ. ಈ ಬಾರಿ ಜೂನ್ 4ಕ್ಕೆ ಮುಂಗಾರು ಆಗಮಿಸಲಿದೆ ಎಂದು ಅಂದಾಜಿಸಲಾಗಿದ್ದರೂ, ‘ಎಲ್ ನಿನೋ’ ಪರಿಣಾಮ ಹಾಗೂ ಬಂಗಾಳ ಕೊಲ್ಲಿಯಲ್ಲಿ ನಿರ್ಮಾಣವಾಗಿರುವ ಚಂಡಮಾರುತೀಯ ವಾತಾವರಣದಿಂದಾಗಿ ಮಾರುತಗಳ ಚಲನವಲನಕ್ಕೆ ತಡೆಯುಂಟಾಗಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ಬೀಸುವ ತೇವಾಂಶಯುತ ಗಾಳಿಯ ದಿಕ್ಕು ಹಾಗೂ ವೇಗದಲ್ಲಿ ವ್ಯತ್ಯಾಸವಾಗಿರುವುದರಿಂದ ಈ ಬಾರಿ ಆರಂಭದಲ್ಲಿ ಮುಂಗಾರು ದುರ್ಬಲವಾಗಿರಲಿದ್ದು, ಕ್ರಮೇಣ ಪ್ರಬಲವಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: 

ಸಿದ್ದರಾಮಯ್ಯ  ಅವರ ಅವಶ್ಯಕತೆ ಇನ್ನೂ ನಮ್ಮ ಪಕ್ಷಕ್ಕೆ ಸಾಕಷ್ಟಿದೆ : ಹೆಚ್‌.ಸಿ ಬಾಲಕೃಷ್ಣ – vishwanews24

ಕರಾವಳಿ ಭಾಗದ ಪ್ರಮುಖ ಬೆಳೆಗಳಾದ ಭತ್ತದ ಬಿತ್ತನೆ, ಅಡಕೆ, ತೆಂಗು ಹಾಗೂ ರಬ್ಬರ್ ತೋಟಗಳ ನಿರ್ವಹಣೆ ಸಂಪೂರ್ಣವಾಗಿ ಮುಂಗಾರು ಮಳೆಯನ್ನೇ ಅವಲಂಬಿಸಿದೆ. ಮಳೆ ತಡವಾದರೆ ಕೃಷಿ ಚಟುವಟಿಕೆಗಳಿಗೆ ಭಾರಿ ಹಿನ್ನಡೆಯಾಗಲಿದೆ. ಈಗಾಗಲೇ ಗ್ರಾಮೀಣ ಭಾಗದ ಬಾವಿ ಹಾಗೂ ಜಲಮೂಲಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಆತಂಕ ಎದುರಾಗಿದೆ. ಇದರೊಂದಿಗೆ ಬಿಸಿಲಿನ ವಾತಾವರಣವು ಮೀನುಗಾರಿಕೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.

ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸುವ ದಿನಾಂಕಗಳಲ್ಲಿ ಪ್ರತಿ ವರ್ಷವೂ ಏರಿಳಿತಗಳಾಗುತ್ತಿರುತ್ತವೆ. ಕಳೆದ 2025ರ ವರ್ಷದಲ್ಲಿ ಮುಂಗಾರು ಅತ್ಯಂತ ವೇಗವಾಗಿ ಕೇರಳ ಪ್ರವೇಶಿಸಿದ ದಿನವೇ ಕರ್ನಾಟಕದ ಕರಾವಳಿಗೂ ತಲುಪಿತ್ತು. ಇದು 2009ರ ನಂತರದ ಅತಿ ವೇಗದ ಆಗಮನವಾಗಿತ್ತು. ಆದರೆ 2021ರಲ್ಲಿ ಜೂನ್ 3ಕ್ಕೆ ಹಾಗೂ 2023ರಲ್ಲಿ ಜೂನ್ 8ರಷ್ಟು ತಡವಾಗಿ ಮುಂಗಾರು ಪ್ರವೇಶಿಸಿತ್ತು. ಈ ಬಾರಿಯೂ ಜೂನ್ 2ರಿಂದ 4ರ ನಡುವೆ ಮಳೆಗಾಲ ಆರಂಭವಾಗುವ ನಿರೀಕ್ಷೆ ಇದ್ದರೂ ದಿನಾಂಕದಲ್ಲಿ ಮತ್ತಷ್ಟು ಬದಲಾವಣೆಗಳನ್ನು ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ: 

ಚಲಿಸುತ್ತಿದ್ದ ಕಾರಿನ ಟೈಯರ್ ಸ್ಫೋಟಗೊಂಡು ಲಾರಿಗೆ ಡಿಕ್ಕಿ :ಐವರು ದುರ್ಮರಣ – vishwanews24

Leave a Reply