ರಾಮನಗರದಲ್ಲಿ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ : ಅನಿತಾ ಕುಮಾರಸ್ವಾಮಿ ಗೆ ಬೆಂಬಲ
ಬೆಂಗಳೂರು: ರಾಮನಗರ ಉಪಚುನಾವಣೆಯಿಂದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಹಿಂದೆ ಸರಿದಿದ್ದಾರೆ.
ಗುರುವಾರ ಬೆಳಗ್ಗೆ ಸಂಸದ ಡಿ.ಕೆ.ಸುರೇಶ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಜೆಡಿಎಸ್ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ.
ಮಂಡ್ಯಕ್ಕೆ ಬಿಜೆಪಿ ಪ್ರಮುಖ ನಾಯಕರೆಲ್ಲರೂ ಪ್ರಚಾರಕ್ಕೆ ತೆರಳುತ್ತಿದ್ದಾರೆ. ನನ್ನ ಪರವಾಗಿ ಇದುವರೆಗೂ ಯಾರು ಬಂದು ಪ್ರಚಾರ ಮಾಡಿಲ್ಲ, ಯಡಿಯೂರಪ್ಪನವರು ಒಂದೇ ಒಂದು ದಿನ ನನ್ನ ಜೊತೆ ಮಾತನಾಡಿಲ್ಲ, ಯೋಗೀಶ್ವರ್ ಸರ್ಕಾರ ಬೀಳಿಸುತ್ತೇನೆ ಎಂದು ಹೇಳಿದ್ರು, ಚುನಾವಣೆಯ ಸಂಪೂರ್ಣ ಖರ್ಚು ವೆಚ್ಚ ಭರಿಸುವುದಾಗಿ ಹೇಳಿದರು, ಆದರೆ ಬಿಜೆಪಿಯಲ್ಲಿ ಯಾರನ್ನು ಕಂಡರೆ ಯಾರಿಗೂ ಆಗುವುದಿಲ್ಲ, ಯಾರೂ ಇಲ್ಲಿ ಕಾರು ನಿಲ್ಲಿಸಿ ಸ್ವಲ್ಪ ಪ್ರಚಾರವೂ ನಡೆಸಿಲ್ಲ ಎಂದಿದ್ದಾರೆ.
ನಾನು ಮೂಲತಃ ಕಾಂಗ್ರೆಸಿಗ ಮತ್ತೆ ಮಾತೃ ಪಕ್ಷವನ್ನು ಸೇರ್ಪಡೆಯಾಗುತ್ತೇನೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರ ಪುತ್ರ ಎಲ್ ಚಂದ್ರಶೇಖರ್ ಅವರಿಗೆ ಬಿಜೆಪಿ ಬಿ ಫಾರಂ ನೀಡಿತ್ತು.
ಜಾಹೀರಾತುಗಳು

