ರಾಹುಲ್ ಗಾಂಧಿಯನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಸಂಚು ಮಾಡಿದೆ : ಸಿದ್ದರಾಮಯ್ಯ -vishwanews24
ರಾಹುಲ್ ಗಾಂಧಿಯನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿ ಸಂಚು ಮಾಡಿದೆ : ಸಿದ್ದರಾಮಯ್ಯ
ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಗಾದ್ರೂ ಮಾಡಿ ರಾಹುಲ್ ಗಾಂಧಿ ಅವರನ್ನ ರಾಜಕೀಯವಾಗಿ ಮುಗಿಸಬೇಕೆಂದು ಸಂಚು ಮಾಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
‘ಶುದ್ಧೀಕರಣ’ ಹೇಳಿಕೆ ಸಂಬಂಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಎಸ್ಸಿ-ಎಸ್ಟಿ ಕಾಯ್ಡೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿರುವುದನ್ನ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಅವರು, “ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದ ಜಾಗವನ್ನ ಉತ್ತರಖಂಡದವರು ಶುದ್ಧೀಕರಣ ಮಾಡಿದ್ದಾರೆ. ಸಂವಿಧಾನ ಅಸ್ಪೃಶ್ಯತೆಯನ್ನ ರದ್ದು ಮಾಡಿದೆ. ಆದ್ರೆ ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳಾಗುತ್ತಿದ್ದರೂ ಈ ರೀತಿ ಮಾಡಿರೋದು ಸಂವಿಧಾನದ ಆಶಯ ವಿರೋಧ ಮಾಡಿದಂತೆ. ಇದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಮಾಡಿದ ಅಪಮಾನವಲ್ಲ, ದಲಿತ ಸಮುದಾಯಕ್ಕೆ ಮಾಡಿದ ಅಪಮಾನ. ರಾಹುಲ್ ಗಾಂಧಿ ಏನು ತಪ್ಪು ಮಾಡಿದ್ದಾರೆ? ಇದರ ವಿರುದ್ಧ ನಾವೆಲ್ಲ ಪ್ರತಿಭಟನೆ ಮಾಡಬೇಕು” ಎಂದು ಹೇಳಿದರು.
“ಉತ್ತರಾಖಂಡದವರು ಮಾಡಿದ ತಪ್ಪನ್ನ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಕಾನೂನಿನ ಪ್ರಕಾರ ಯಾರು ಶುದ್ಧೀಕರಣ ಮಾಡಿದ್ದಾರೋ ಅವರ ವಿರುದ್ಧ ಎಸ್ಸಿ -ಎಸ್ಟಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಬೇಕು. ಆದ್ರೆ ಯಾವ ತಪ್ಪು ಮಾಡದ ರಾಹುಲ್ ಗಾಂಧಿ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಸಂವಿಧಾನದ ಪರ ಇರುವವರು, ಅಸ್ಪೃಶ್ಯತೆಯ ವಿರುದ್ಧ ಇರುವವರು” ಎಂದರು.
“ರಾಹುಲ್ ಗಾಂಧಿ ಅವರ ಬಾಯಿ ಮುಚ್ಚಿಸಲು ಹೀಗೆ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೇಗಾದ್ರೂ ಮಾಡಿ ರಾಹುಲ್ ಗಾಂಧಿ ಅವರನ್ನ ರಾಜಕೀಯವಾಗಿ ಮುಗಿಸಬೇಕೆಂದು ಸಂಚು ಮಾಡಿದೆ. ಈ ಹಿಂದೆಯೂ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನ ಟೀಕಿಸಿದ್ದಾಗ ಲೋಕಸಭೆಗೆ ರಾಹುಲ್ ಗಾಂಧಿ ಬರದಂತೆ ಮಾಡಲು ಅವರ ಸದಸ್ಯತ್ವವನ್ನೇ ರದ್ದು ಮಾಡಿದ್ರು. ಸುಪ್ರೀಂ ಕೋರ್ಟ್ನಲ್ಲಿ ಹೋಗಿ ರಾಹುಲ್ ಗಾಂಧಿ ಅವರು ಸದಸ್ಯತ್ಯ ವಾಪಸ್ ಪಡೆದುಕೊಳ್ಳಬೇಕಾಯ್ತು. ಇಂತಹ ಕಾನೂನು ಬಾಹಿರ ಕ್ರಮವನ್ನ ಕೇಂದ್ರ ಸರ್ಕಾರ ಮಾಡುತ್ತಾ ಬಂದಿದೆ” ಎಂದು ಕಿಡಿಕಾರಿದರು.
