ರೈಲ್ವೆ ಸೇತುವೆ ಬಳಿ ಮಲ್ಲಾರಿನ ವ್ಯಕ್ತಿಯ ಸಂಶಯಾಸ್ಪದ ಸಾವು : ತನಿಖೆಗೆ ಆಗ್ರಹಿಸಿ ಪುತ್ರಿಯಿಂದ ದೂರು -Vishwanews24

Featured, ಉಡುಪಿ

ರೈಲ್ವೆ ಸೇತುವೆ ಬಳಿ ಮಲ್ಲಾರಿನ ವ್ಯಕ್ತಿಯ ಸಂಶಯಾಸ್ಪದ ಸಾವು : ತನಿಖೆಗೆ ಆಗ್ರಹಿಸಿ ಪುತ್ರಿಯಿಂದ ದೂರು -Vishwanews24

ಕಾಪು, : ಉದ್ಯಾವರದ ಬೊಳ್ಜೆ ಪಾಪನಾಶಿನಿ ಹೊಳೆಯ ರೈಲ್ವೆ ಸೇತುವೆ ಬಳಿ ಮಲ್ಲಾರಿನ ವ್ಯಕ್ತಿಯೊಬ್ಬರ ಸಂಶಯಾಸ್ಪದವಾಗಿ ಮೃತಪಟ್ಟ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಲಾರು ಗ್ರಾಮದ ಕನ್ನಡ ಶಾಲೆ ಹತ್ತಿರ ನಿವಾಸಿ ಉಬೇದುಲ್ಲಾ ಯಾನೆ ಮೊಹಮ್ಮದ್ ಖಾಸಿಂ(59) ಎಂಬವರ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ ಮೃತರ ಪುತ್ರಿ ತನಿಖೆಗೆ ಆಗ್ರಹಿಸಿ ಠಾಣೆಗೆ ದೂರು ನೀಡಿದ್ದಾರೆ.

ಗ್ಯಾರೇಜ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಉಬೇದುಲ್ಲಾ, ಆ.23ರಂದು ಮನೆಯಿಂದ ಬೈಕಿನಲ್ಲಿ ಉಡುಪಿಗೆ ತೆರಳಿದ್ದರು. ಸಂಜೆ 7:30ರ ಸುಮಾರಿಗೆ ಮಗಳು ಕರೆ ಮಾಡಿದಾಗ ಮನೆಗೆ ಈಗ ಬರುವುದಾಗಿ ಹೇಳಿದ್ದರು. ಬಳಿಕ ರಾತ್ರಿ 8 ಗಂಟೆಗೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು.

ಆ.24ರಂದು ಬೆಳಿಗ್ಗೆ ಅವರ ಮೃತದೇಹವು ಉದ್ಯಾವರದ ಬೊಳ್ಜೆ ಪಾಪನಾಶಿನಿ ಹೊಳೆಯ ರೈಲ್ವೆ ಸೇತುವೆ ಬಳಿ ಪತ್ತೆಯಾಗಿದ್ದು, ಮೃತದೇಹದ ಬಲಬದಿ ಹಣೆಯ ಸಮೀಪ ತರಚಿದ ಗಾಯ ಕಂಡುಬಂದಿದೆ ಎಂದು ದೂರಲಾಗಿದೆ. ಇವರು ಆ.23ರಂದು ರಾತ್ರಿ ವೇಳೆ ಮೃತಪಟ್ಟಿರುವ ಸಾಧ್ಯತೆ ಇದ್ದು ಮೃತರ ಸಾವಿನಲ್ಲಿ ಸಂಶಯವಿರುವುದಾಗಿ ಮಗಳು ಆಫ್ರೀನ್ ಬಾನು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.