ರೈಲ್ವೆಯಿಂದ ಬ್ಯಾಂಕ್‌ ಸೇವೆಗಳ ವರೆಗೆ ಹೊಸ ನಿಯಮ : ಇಂದಿನಿಂದ ದೇಶಾದ್ಯಂತ 5 ಪ್ರಮುಖ ಬದಲಾವಣೆ ಜಾರಿಗೆ  – vishwanews24

Featured, ರಾಷ್ಟ್ರ ನ್ಯೂಸ್

ರೈಲ್ವೆಯಿಂದ ಬ್ಯಾಂಕ್‌ ಸೇವೆಗಳ ವರೆಗೆ ಹೊಸ ನಿಯಮ : ಇಂದಿನಿಂದ ದೇಶಾದ್ಯಂತ 5 ಪ್ರಮುಖ ಬದಲಾವಣೆ ಜಾರಿಗೆ ..

ಏನೆಲ್ಲಾ ಬದಲಾಗುತ್ತಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ನವದೆಹಲಿ: ಆಗಸ್ಟ್ 1ರಿಂದ ದೇಶಾದ್ಯಂತ ಹಲವು ಪ್ರಮುಖ ಹಣಕಾಸು ಮತ್ತು ಸಾರ್ವಜನಿಕ ಸೇವೆಗಳ ನಿಯಮಗಳಲ್ಲಿ ಬದಲಾವಣೆ ಜಾರಿಯಾಗಿದೆ. ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಿಂದ ಹಿಡಿದು ಎಲ್‌ಪಿಜಿ ಸಿಲಿಂಡರ್ ದರ, ಆದಾಯ ತೆರಿಗೆ ಸಲ್ಲಿಕೆ, ಸೆಂಟ್ರಲ್ ಕೆವೈಸಿ  ಹಾಗೂ ಬ್ಯಾಂಕಿಂಗ್-ಕ್ರೆಡಿಟ್ ಕಾರ್ಡ್ ಸೇವೆಗಳವರೆಗೆ ಒಟ್ಟು ಐದು ಪ್ರಮುಖ ಬದಲಾವಣೆಗಳು ಜಾರಿಗೆ ಬಂದಿದ್ದು, ಇವು ಸಾಮಾನ್ಯ ಜನರ ದೈನಂದಿನ ಬದುಕು ಮತ್ತು ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.

1. ತತ್ಕಾಲ್ ಟಿಕೆಟ್‌ಗೆ ಹೊಸ ಟೋಕನ್ ವ್ಯವಸ್ಥೆ : ರೈಲ್ವೆ ಕೌಂಟರ್‌ಗಳಲ್ಲಿ ತತ್ಕಾಲ್ ಟಿಕೆಟ್ ಪಡೆಯುವ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಟೋಕನ್ ವ್ಯವಸ್ಥೆ ಜಾರಿಗೆ ಬಂದಿದೆ. ಸರತಿ ಸಾಲಿನ ಆಧಾರದ ಮೇಲೆ ಟೋಕನ್ ನೀಡಲಾಗುವುದರಿಂದ ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲುವ ಅಗತ್ಯ ಇರುವುದಿಲ್ಲ. ಇದರಿಂದ ಏಜೆಂಟ್‌ಗಳ ಹಾವಳಿ ಕಡಿಮೆಯಾಗುವ ಜೊತೆಗೆ ಬುಕ್ಕಿಂಗ್ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಲಿದೆ.

ಇದನ್ನೂ ಓದಿ:

ಭಾರಿಮಳೆ : ಮುಳ್ಳಯ್ಯನಗಿರಿಯಲ್ಲಿ ಗುಡ್ಡ ಕುಸಿತ ; ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಜಿಲ್ಲಾಡಳಿತ ಎಚ್ಚರಿಕೆ – vishwanews24

2. LPG ಸಿಲಿಂಡರ್ ದರ ಪರಿಷ್ಕರಣೆ : ಪ್ರತಿ ತಿಂಗಳಂತೆ ಆಗಸ್ಟ್ 1ರಂದು ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರವನ್ನು ಪ್ರಕಟಿಸಿವೆ. ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್ ದರಗಳಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದ್ದು, ದರ ಏರಿಕೆಯಾದರೆ ಕುಟುಂಬಗಳ ಅಡುಗೆ ವೆಚ್ಚ ಹಾಗೂ ಹೋಟೆಲ್-ರೆಸ್ಟೋರೆಂಟ್‌ಗಳ ವೆಚ್ಚವೂ ಹೆಚ್ಚಾಗುವ ಸಾಧ್ಯತೆ ಇದೆ.

3. ತಡವಾಗಿ ITR ಸಲ್ಲಿಸಿದವರಿಗೆ ದಂಡ : ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದವರು ಆಗಸ್ಟ್ 1ರಿಂದ ತಡ ಶುಲ್ಕ ಪಾವತಿಸಬೇಕಾಗುತ್ತದೆ. ರೂ. 5 ಲಕ್ಷದೊಳಗಿನ ಆದಾಯ ಹೊಂದಿದವರಿಗೆ ರೂ.1,000 ಹಾಗೂ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿದವರಿಗೆ ರೂ. 5,000ರವರೆಗೆ ದಂಡ ವಿಧಿಸಲಾಗುತ್ತದೆ. ಜೊತೆಗೆ ಬಾಕಿ ತೆರಿಗೆಯ ಮೇಲೆ ಬಡ್ಡಿಯೂ ಅನ್ವಯವಾಗಲಿದೆ.

4. CKYC 2.0 ವ್ಯವಸ್ಥೆ ಜಾರಿ : ಹೊಸ ಸೆಂಟ್ರಲ್ ಕೆವೈಸಿ (CKYC 2.0) ವ್ಯವಸ್ಥೆ ಜಾರಿಗೆ ಬಂದಿದ್ದು, ಒಮ್ಮೆ ಕೆವೈಸಿ ಪೂರ್ಣಗೊಳಿಸಿದ ಬಳಿಕ 14 ಅಂಕಿಯ CKYC ಸಂಖ್ಯೆಯ ಮೂಲಕ ವಿವಿಧ ಬ್ಯಾಂಕ್, ವಿಮೆ ಮತ್ತು ಮ್ಯೂಚುವಲ್ ಫಂಡ್ ಸೇವೆಗಳನ್ನು ಸುಲಭವಾಗಿ ಪಡೆಯಬಹುದಾಗಿದೆ. ಗ್ರಾಹಕರ ಅನುಮತಿ ಮತ್ತು OTP ಮೂಲಕವೇ ಮಾಹಿತಿ ಹಂಚಿಕೆಯಾಗುವುದರಿಂದ ಭದ್ರತೆಯೂ ಹೆಚ್ಚಲಿದೆ.

ಇದನ್ನೂ ಓದಿ:

ಉಪಸಭಾಪತಿ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಎಂ.ಕೆ.ಪ್ರಾಣೇಶ್ ರಾಜೀನಾಮೆ – vishwanews24

5. ಬ್ಯಾಂಕಿಂಗ್ ಹಾಗೂ ಕ್ರೆಡಿಟ್ ಕಾರ್ಡ್ ಸೇವೆಗಳಲ್ಲಿ ಬದಲಾವಣೆ : ಕೆಲವು ಪ್ರಮುಖ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕ, ಯುಟಿಲಿಟಿ ಬಿಲ್ ಪಾವತಿ ನಿಯಮಗಳು, ರಿವಾರ್ಡ್ ಪಾಯಿಂಟ್‌ಗಳು ಹಾಗೂ ನಿಶ್ಚಿತ ಠೇವಣಿ (FD) ಮೇಲಿನ ಬಡ್ಡಿದರಗಳಲ್ಲಿ ಬದಲಾವಣೆ ಮಾಡಿವೆ. ಕೆಲವು ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಸಾಧ್ಯತೆಯೂ ಇದೆ.

ಹೊಸ ನಿಯಮಗಳಿಂದ ಅನಗತ್ಯ ವೆಚ್ಚ ತಪ್ಪಿಸಲು ಬ್ಯಾಂಕ್‌ಗಳಿಂದ ಬಂದಿರುವ SMS ಹಾಗೂ ಇ-ಮೇಲ್‌ಗಳನ್ನು ಪರಿಶೀಲಿಸುವುದು, ಕ್ರೆಡಿಟ್ ಕಾರ್ಡ್‌ನ ಹೊಸ ನಿಯಮಗಳನ್ನು ತಿಳಿದುಕೊಳ್ಳುವುದು, ITR ಸಲ್ಲಿಕೆಯನ್ನು ವಿಳಂಬ ಮಾಡದಿರುವುದು ಹಾಗೂ LPG ದರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಸೂಕ್ತ.

Leave a Reply