ಲೋಕಸಭಾ ಚುನಾವಣೆ: ಕಾಂಗ್ರೆಸ್‌ ನಮಗೆ ಕನಿಷ್ಠ 12 ಸ್ಥಾನಗಳನ್ನು ಬಿಟ್ಟು ಕೊಡಬೇಕು, ನೀಡದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಲು ಸಿದ್ಧ: ಎಚ್.ಡಿ.ರೇವಣ್ಣ – Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಹಾಸನ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ನಮಗೆ ಕನಿಷ್ಠ 12 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂಬುದು ನಮ್ಮ ಬಯಕೆ. ಒಂದು ವೇಳೆ ನೀಡದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸಲು ಸಿದ್ಧರಿದ್ದೇವೆ ಎಂದು ಲೋಕೋಪಯೋಗಿ ಸಚಿವ, ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಲೋಕಸಭಾ ಚುನಾವಣಾ ಮೈತ್ರಿ ಮಾಡಿಕೊಳ್ಳಬೇಕು ಎಂಬುದೂ ನಮ್ಮ ಆಶಯವಾಗಿದೆ ಎಂದರು. ಜತೆಗೆ ತ್ರಿಕೋನ ಸ್ಪರ್ಧೆ ಎದುರಾದರೂ ಜೆಡಿಎಸ್ ಸೆಣಸಾಟ ಮಾಡಲಿದೆ ಎಂದರು.

ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿಯಾದರೆ ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿ ಕೂಟದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ. ಎಚ್‌ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಜನತಾದಳ 18 ಲೋಕಸಭಾ ಕ್ಷೇತ್ರಗಳನ್ನು ಗೆದ್ದಿರುವ ಉದಾಹರಣೆ ಇದೆ ಎಂದೂ ಅವರು ನೆನಪಿಸಿದರು. ಈಗಲೂ ಅದೇ ಸಾಧನೆ ಮಾಡಲಿದ್ದೇವೆ ಎಂದರು.