ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ಪ್ರಿಯಾಂಕಾ ಗಾಂಧಿ – Vishwanews24

ರಾಷ್ಟ್ರ ನ್ಯೂಸ್

ನವದೆಹಲಿ: ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ನಿಂತು ಇಡೀ ದೇಶದ ಗಮನ ಸೆಳೆದಿದ್ದರು. ಈ ಬಾರಿ ಅದೇ ಕ್ಷೇತ್ರ ಮತ್ತೊಂದು ಬಿಗ್ ಫೈಟ್ ಕಾಣುವ ನಿರೀಕ್ಷೆಇದೆ. ಮೋದಿ ವರ್ಸಸ್ ಪ್ರಿಯಾಂಕಾ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಹೊಸ ಸ್ಟಾರ್ ಪ್ರಿಯಾಂಕಾ ಗಾಂಧಿ ಅವರು ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡುವ ವೇಳೆ ಪ್ರಿಯಾಂಕಾ ಗಾಂಧಿ ಇಂಥದ್ದೊಂದು ಆಸೆ ವ್ಯಕ್ತಪಡಿಸಿದರು. ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದ ಮತದಾರರು ಇದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪ್ರಿಯಾಂಕಾ ಗಾಂಧಿ ಅವರನ್ನು ಒತ್ತಾಯಿಸಿದಾಗ ಅವರ ಬಾಯಿಂದ ವಾರಾಣಸಿಯಲ್ಲಿ ನಿಲ್ಲುವ ಬಯಕೆ ವ್ಯಕ್ತವಾಯಿತು. “ವಾರಾಣಸಿಯಲ್ಲಿ ಯಾಕಾಗಬಾರದು?” ಎಂದು ರಾಯ್ ಬರೇಲಿಯ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಿಯಾಂಕಾ ಕೇಳಿದರು.

ಪ್ರಿಯಾಂಕಾ ಗಾಂಧಿ ಈ ವರ್ಷವಷ್ಟೇ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ಗೆ ಅವರೇ ಸ್ಟಾರ್ ಕೆಂಪೇನರ್ ಆಗಿದ್ದಾರೆ. ತಮ್ಮ ತಾಯಿಯ ರಾಯ್ ಬರೇಲಿ ಕ್ಷೇತ್ರವನ್ನಂತೂ ಅವರು ಇಂಚಿಂಚೂ ಸುತ್ತಿ ಕಾರ್ಯಕರ್ತರಿಗೆ ಪುಷ್ಟಿ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವ ಸುದ್ದಿಯೂ ಇರಲಿಲ್ಲ. ನಿನ್ನೆಯಷ್ಟೇ ಪ್ರಿಯಾಂಕಾ ಅವರು ಪಕ್ಷ ಬಯಸಿದರೆ ಚುನಾವಣೆಯ ಅಖಾಡಕ್ಕೆ ಇಳಿಯುವುದಾಗಿ ತಿಳಿಸಿದ್ದರು. ರಾಯ್ ಬರೇಲಿಯಲ್ಲೇ ಅವರು ಚುನಾವಣೆಗೆ ನಿಲ್ಲಬಹುದೆಂಬ ವದಂತಿಗಳಿದ್ದವು. ಈಗ ಅವರು ವಾರಾಣಸಿಯಲ್ಲಿ ಸ್ಪರ್ಧಿಸುವ ಇಚ್ಛೆ ತೋರ್ಪಡಿಸಿದ್ದಾರೆ.