ವಿಧಾನ ಸಭೆಯಲ್ಲಿ ಗೋ ಹತ್ಯೆ ನಿಷೇಧ ಮಸೂದೆ ಅಂಗೀಕಾರ : ಬಿಜೆಪಿ ಸದಸ್ಯರ  ಸಂಭ್ರಮ -Vishwanews24

Featured, ರಾಜ್ಯ ನ್ಯೂಸ್

ಗೋ ಹತ್ಯೆ ನಿಷೇಧ ವಿಧೇಯಕ : ಕೇಸರಿ ಶಾಲು ಹಾಕಿಕೊಂಡು ಬಿಜೆಪಿ ಸದಸ್ಯರ  ಸಂಭ್ರಮ -Vishwanews24

ಹೊಸ ಕಾನೂನಿನಲ್ಲಿ ಏನಿದೆ? 

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ, ಧರಣಿ, ಸಭಾತ್ಯಾಗದ ನಡುವೆಯೇ ರಾಜ್ಯದಲ್ಲಿ ಗೋಹತ್ಯೆ ನಿಷೇಧಕ್ಕೆ ಕಠಿಣ ನಿಯಮಗಳನ್ನು ಒಳಗೊಂಡ ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕಕ್ಕೆ ಅನುಮೋದನೆ ಪಡೆದು ಕೊಳ್ಳುವಲ್ಲಿ ಸರ್ಕಾರ ಬುಧವಾರ ಯಶಸ್ಸು ಸಾಧಿಸಿದೆ.

ಈ ಮುಖೇನ ಉತ್ತರ ಪ್ರದೇಶ ಸರ್ಕಾರದ ನಂತರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವ ಎರಡನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲು ಮುಂದಾಗಿದೆ.

ಗೋ ಹತ್ಯೆ ಮಾಡಿದರೆ 7 ವರ್ಷಗಳವರೆಗೆ ಜೈಲುವಾಸ, ಮೊದಲ ಬಾರಿ ಜಾನುವಾರು ಹತ್ಯೆಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸುವ ಅಂಶಗಳು ಈ ಕಾಯ್ದೆಯಲ್ಲಿವೆ. ವಿಧಾನ ಪರಿಷತ್‌ನಲ್ಲೂ ವಿಧೇಯಕ ಅನುಮೋದನೆ ಪಡೆದುಕೊಂಡ ಬಳಿಕ ರಾಜ್ಯಪಾಲರ ಸಹಿಗೆ ಕಳಿಸಲಾಗುತ್ತದೆ. ಬಳಿಕ ನಿಯಮ ರಚಿಸಿ ಕಾಯ್ದೆ ಜಾರಿಗೆ ಬರಲಿದೆ.

ಇನ್ನು ವಿಧಾನಸಭೆಯಲ್ಲಿ ಬುಧವಾರ ವಿಧೇಯಕ ಮಂಡನೆ ಪ್ರಕ್ರಿಯೆ ತಟ್ಟನೆ ನಡೆಯಿತು. ಪಶು ಸಂಗೋಪನೆ ಸಚಿವ ಪ್ರಭು ಚೌವ್ಹಾಣ್ , ವಿಧೇಯಕ ಮಂಡನೆಗೆ ಮುಂದಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರತಿಪಕ್ಷಗಳ ಅನೇಕ ಸದಸ್ಯರು ಆಕ್ಷೇಪಿಸಿದರು. ಸ್ಪೀಕರ್ ಪೀಠದ ಮುಂದೆ ಧಾವಿಸಿ ಗದ್ದಲ, ಗಲಾಟೆ ನಡೆಸಿದರು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ಪರ ವಿರೋಧ ಘೋಷಣೆ ಕೂಗಿದರು.

ಬಿಜೆಪಿ ಸದಸ್ಯರು ಕೇಸರಿ ಶಾಲು ಹೊದ್ದು ಸಂಭ್ರಮಿಸಿದರಲ್ಲದೆ, ವಿಧಾನಸಭೆ ಹೊರ ಆವರಣದಲ್ಲಿ ಗೋವು ತಂದು ಪೂಜೆ ಸಲ್ಲಿಸಿದರು.

ಇನ್ನು ವಿಧೇಯಕ ಮಂಡನೆಗೂ ಮುನ್ನ ಮತ್ತು ಬಳಿಕ ಬಿಜೆಪಿ ನಾಯಕರು ವಿಧಾನಸೌಧ ಆವರಣದಲ್ಲಿ ಗೋ ಪೂಜೆ ನೆರವೇರಿಸಿದರು. ಗೋವುಗಳನ್ನು ವಿಧಾನಸೌಧಕ್ಕೆ ತರಿಸಿಕೊಂಡಿದ್ದ ಪಕ್ಷದ ನಾಯಕರು, ವಿಶೇಷ ಪೂಜೆ ನೆರವೇರಿಸಿ ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದರು. ಜತೆಗೆ ಕೇಸರಿ ಶಾಲು ಹಾಕಿಕೊಂಡು ಸಂಭ್ರಮಿಸಿ ಕಲಾಪದಲ್ಲಿ ಪಾಲ್ಗೊಂಡರು.

ಗೋ ಹತ್ಯೆ ನಿಷೇಧ ಮಸೂದೆ ಮಂಡನೆಗೆ ಮುಂದಾದ ಸರ್ಕಾರದ ನಡೆಗೆ ವಿರೋಧ ಪಕ್ಷಗಳು ತೀವ್ರ ಅಸಮಾಧಾನ ಹೊರಹಾಕಿದರು. ಗೋ ಹತ್ಯೆ ನಿಷೇಧ ಮಸೂದೆ ಬಗ್ಗೆ ವಿಪಕ್ಷ ಸದಸ್ಯರ ಚರ್ಚೆಯಿಲ್ಲದೆ ಬರೀ ಆಡಳಿತ ಪಕ್ಷದ ಸದಸ್ಯರು ಮಾತ್ರ ಚರ್ಚೆ ಮಾಡಿ ವಿಧೇಯಕ ಅಂಗೀಕಾರಗೊಂಡಿತು.

ಈ ಕುರಿತು ಮಾನಾಡಿದ ಟೀಂ ಚೌಕಿದಾರ್ ಇದರ ಸದಸ್ಯ ಮಹೇಶ್ ತುಪ್ಪೆಕಲ್ಲು, ಗೋ ಹತ್ಯೆ ನಿಷೇಧ ಮಸೂದೆ ಮಂಡನೆ ಭಾರತದ ಪಾಲಿಗೆ ಬಹಳ ಸಂತೋಷದ ದಿನವಾಗಿದೆ. ಕರ್ನಾಟಕದಲ್ಲಿ ಗೋ ಹತ್ಯೆ ಸಾಗಾಟ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

  • ಗೋ ಹತ್ಯೆ ಅರಿವಿನ ಅಪರಾಧ
  • ಪ್ರಕರಣಗಳನ್ನು ವಿಲೇವಾರಿ ಮಾಡಲು ವಿಶೇಷ ನ್ಯಾಯಾಲಯಗಳನ್ನು ರಚಿಸುವಂತೆ ಮಸೂದೆ ಶಿಫಾರಸು ಮಾಡಿದೆ
  • ಇತರ ರಾಜ್ಯಗಳಿಗೆ ಗೋವುಗಳನ್ನು ಸಾಗಣೆ ಮಾಡುವಂತಿಲ್ಲ.
  • ಮೊದಲ ಬಾರಿಗೆ ಮಾಡಿದ ಅಪರಾಧಕ್ಕೆ ದಂಡ, 50 ಸಾವಿರದಿಂದ 5 ಲಕ್ಷ ರೂಪಾಯಿಗಳವರೆಗೆ ದಂಡ, ಎರಡನೆಯ ಮತ್ತು ನಂತರದ ಅಪರಾಧಕ್ಕೆ 1 ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ದಂಡದ ಮೊತ್ತವಿರುತ್ತದೆ.
  • ವಶಪಡಿಸಿಕೊಂಡ ಗೋಮಾಂಸವನ್ನು ಎಸೆಯಬೇಕೆ ಹೊರತು ಬಳಸಬಾರದು.

ಹಸು, ಕರು, ಎಮ್ಮೆ, ಎತ್ತು ಹಾಗೂ 13 ವರ್ಷ ಕೆಳಗಿನ ಕೋಣ ಹತ್ಯೆ ನಿಷೇಧ ತಪ್ಪಿತಸ್ಥರಿಗೆ 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಪ್ರತಿ ಗೋ ಹತ್ಯೆಗೆ 50,000 ದಿಂದ ಗರಿಷ್ಠ ಐದು ಲಕ್ಷ ರೂ.ವರೆಗೆ ದಂಡ. ಪುನರಾವರ್ತಿತ ಅಪರಾಧಕ್ಕೆ 1 ಲಕ್ಷದಿಂದ 10 ಲಕ್ಷದವರೆಗೆ ದಂಡ ಹಾಗೂ ಏಳು ವರ್ಷ ಜೈಲು ಶಿಕ್ಷೆ

ಗೋ ಹತ್ಯೆ ಉದ್ದೇಶಕ್ಕಾಗಿ ಅಂತರಾಜ್ಯ ಹಾಗೂ ರಾಜ್ಯದೊಳಗಡೆ ಗೋ ಸಾಗಾಟ ನಿಷೇಧ ಕೃಷಿ ಹಾಗೂ ಪಶುಸಂಗೋಪನೆ ಉದ್ದೇಶಕ್ಕಾಗಿ ಗೋ ಸಾಗಾಟಕ್ಕೆ ಅಧಿಕಾರಿಗಳ ಅನುಮತಿ ಅಗತ್ಯ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಾಗಾಟ ಮಾಡಬೇಕು.

ಈ ನಿಯಮ ಉಲ್ಲಂಘನೆ ಮಾಡಿದರೆ ಮೂರು ವರ್ಷದಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಐವತ್ತು ರೂ. ಸಾವಿರ ದಂಡ. ಎಸ್ ಐ ಶ್ರೇಣಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳು ತಪಾಸಣೆ ಹಾಗೂ ಮುಟ್ಟುಗೋಲು ಮಾಡಲು ಕಾಯ್ದೆಯಲ್ಲಿ ಅಧಿಕಾರ ನೀಡಿದ್ದು, ಮುಟ್ಟುಗೋಲು ಹಾಕಿದ ಕೂಡಲೇ ಸಂಬಂಧಿತ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಗೆ ವರದಿ ಮಾಡಬೇಕು.

ಇನ್ನು ಗೋ ಹತ್ಯೆಗೆ ಸಂಬಂಧಿಸಿದಂತೆ ಸಾಗಾಟ ಮಾಡಿದ ವಾಹನಗಳು ಹಾಗೂ ಇತರ ಸಲಕರಣೆಗಳನ್ನು ಆರೋಪಿಗೆ ಹಿಂದುರಿಗಿಸಲು ಬ್ಯಾಂಕ್ ಗ್ಯಾರಂಟಿ ನೀಡಬೇಕು ಮತ್ತು ಗೋಹತ್ಯೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ರಚನೆಗೆ ಅಧಿಕಾರ ನೀಡುದ್ದು, ಸಂಶೋಧನಾ ಉದ್ದೇಶಕ್ಕಾಗಿ ಬಳಸುವ ಗೋವುಗಳಿಗೆ ವಿನಾಯಿತಿ ನೀಡಲಾಗಿದೆ. ಪಶು ವೈದ್ಯಾಧಿಕಾರಿ ದೃಢೀಕರಿಸಿದ ಗೋ ಹತ್ಯೆ ಮಾಡಲು ಅವಕಾಶ ಮತ್ತು ಯಾವುದೇ ರೋಗಗಳಿಂದ ಬಳಲುತ್ತಿರುವ ಗೋವುಳ ಹತ್ಯೆಗೆ ಅವಕಾಶವನ್ನು ನೀಡಲಾಗಿದೆ.