ವಿಪಕ್ಷಗಳು ಒಗ್ಗಟ್ಟಾಗಿ ಬಿಜೆಪಿಯನ್ನು ಸೋಲಿಸುತ್ತೇವೆ, : ಮಮತಾ ಹೋರಾಟಕ್ಕೆ ಎಚ್‍ಡಿಡಿ ಬೆಂಬಲ

Featured, ರಾಷ್ಟ್ರ ನ್ಯೂಸ್

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಅಧಿಕಾರದ ಕೊನೆಯ ವರ್ಷದಲ್ಲಿ ಇದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಹಿನ್ನೆಲೆಯಲ್ಲೇ ವಿರೋಧ ಪಕ್ಷಗಳು ತಮ್ಮ ತಯಾರಿ ಚಟುವಟಿಕೆಯನ್ನು ತೀವ್ರಗೊಳಿಸಿದೆ. ತೃಣಮೂಲ ಕಾಂಗ್ರೆಸ್​​ ಮುಖ್ಯಸ್ಥೆ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನು ದೆಹಲಿಯ ಭೇಟಿ ಮಾಡಿದ್ದು, ನಾನು ಪ್ರಧಾನಿ ರೇಸ್​ನಲ್ಲಿಲ್ಲ ಎಂದು ತಿಳಿಸಿದ್ದಾರೆ ಮತ್ತು ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಆದರೆ ತಮ್ಮ ಬೆಂಬಲಿ ಇದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಅಸ್ಸಾಂ ಎನ್​ಸಿಆರ್​ ಬಿಲ್​ ಸೇರಿದಂತೆ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಕುರಿತು ಚರ್ಚಿಸಿದೆವು. ಕೇಂದ್ರ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವುದೇ ಚಿಂತೆಯಾಗಿದೆ. ವಿಪಕ್ಷಗಳು ಒಗ್ಗಟ್ಟಾಗಿದ್ದು, ಬಿಜೆಪಿಯನ್ನು ಸೋಲಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದರು. ಸೋನಿಯಾ ಗಾಂಧಿ ಅವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಕಾಂಗ್ರೆಸ್​ನೊಂದಿಗೆ ಹಲವು ವರ್ಷಗಳಿಂದ ಒಳ್ಳೆಯ ಸಂಬಂಧ ಹೊಂದಿದ್ದೇನೆ. ನಾವು ಮುಂದಿನ ರಾಜಕೀಯ, ಎನ್​ಸಿಆರ್​ ಬಿಲ್​ ಸೇರಿದಂತೆ ಹೇಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎನ್ನುವ ಕುರಿತು ಚರ್ಚಿಸಿದ್ದೇವೆ ಎಂದರು..

ಮಮತಾ ಬ್ಯಾನರ್ಜಿ ಹೋರಾಟಕ್ಕೆ ಎಚ್‍ಡಿಡಿ ಬೆಂಬಲ:

ತೃತೀಯ ರಂಗದ ಸಾರಥ್ಯ ಹೊತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಾಜಿ ಪ್ರಧಾನಿ ದೇವಗೌಡರನ್ನು ಇಲ್ಲಿನ ಕರ್ನಾಟಕ ಭವನದಲ್ಲಿ ಭೇಟಿಮಾಡಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರನ್ನು  ಮಮತಾ ಬ್ಯಾನರ್ಜಿಯವರು ಕರ್ನಾಟಕ ಭವನದಲ್ಲಿ ಭೇಟಿಯಾಗಿ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದಾರೆ. ಅಸ್ಸಾಂ ಸರ್ಕಾರದ ಎನ್‌ಆರ್‌ಸಿ ಕರಡು ವಿರೋಧಿಸುತ್ತಿರುವ ಮಮತಾ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದು, ಮಮತಾ ಬ್ಯಾನರ್ಜಿಯವರ ಮನವಿಗೆ ಒಪ್ಪಿಕೊಂಡ ದೇವೇಗೌಡರು ಬೆಂಬಲ ಸೂಚಿಸಿದ್ದಾರೆ.