ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆ ಬರೆದ ಪಿ.ವಿ.ಸಿಂಧು -Vishwanews24
ಬಾಸೆಲ್ : ಭಾರತದ ಶೇಟ್ಲರ್ ಪಿ.ವಿ.ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ಗೆ ಮುತ್ತಿಟ್ಟಿದ್ದಾರೆ. ಪಿ.ವಿ.ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದಾರೆ.
38 ನಿಮಿಷಗಳ ಫೈನಲ್ ಹೋರಾಟದಲ್ಲಿ ಅವರದ್ದು ಅಧಿಕಾರಯುತ ಗೆಲುವು. ಹೈದರಾಬಾದಿನ ಸಿಂಧು 21–7, 21–7ರ ಎರಡು ನೇರ ಗೇಮ್ಗಳಲ್ಲಿ ಜಪಾನಿನ ನೊಜೊಮಿ ಒಕುಹರಾ ವಿರುದ್ಧ ಜಯಶಾಲಿಯಾದರು.
ಈ ಹಿಂದೆ ಎರಡು ಬಾರಿ ಫೈನಲ್ ಪ್ರವೇಶ ಮಾಡಿದ್ದರು. ಆದರೆ ಪ್ರಶಸ್ತಿಯಿಂದ ವಂಚಿತರಾಗಿದ್ದ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದರು. ಇಂದು ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜಪಾನ್ ನ ನೋಜೊಮಿ ಓಕುಹರಾ ಅವರನ್ನು 21-7, 21-7ರ ಅಂತರದಿಂದ ಮಣಿಸುವ ಮೂಲಕ ಇತಿಹಾಸ ಪುಟ ಸೇರಿದ್ದಾರೆ.
ವಿಶ್ವ ಚಾಂಪಿಯನ್ಷಿಪ್ನಲ್ಲಿ ಇದು ಸಿಂಧು ಅವರ ಐದನೇ ಪದಕ. 2013, 2014ರಲ್ಲಿ ಸತತ ಎರಡು ಕಂಚು, 2017 ಮತ್ತು 2018ರಲ್ಲಿ ಸತತ ಎರಡು ಬಾರಿ ಬೆಳ್ಳಿ ಪದಕ ಗೆದ್ದಿದ್ದರು. ಹೋದ ವರ್ಷ ಚೀನಾದ ನಾನ್ಜಿಂಗ್ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಆಡಲು ಹೋಗುವ ಮುನ್ನ ಅವರು, ‘ಹೋದ ಸಲ ಬೆಳ್ಳಿ ಗೆದ್ದಿದ್ದೆ. ಈ ಸಲ ಆ ಪದಕದ ಬಣ್ಣ ಬದಲಿಸುತ್ತೇನೆ’ ಎಂದು ಚಿನ್ನ ಗೆಲ್ಲುವ ವಿಶ್ವಾಸವ್ಯಕ್ತಪಡಿಸಿದ್ದರು. ಆದರೆ ಹೋದ ಸಲವೂ ಅವರು ಬೆಳ್ಳಿ ಪದಕ ಗಳಿಸಿದ್ದರು.
ಈ ಬಾರಿ ಸತತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸಿದ್ದ ಸಿಂಧು, ಚೊಚ್ಚಲ ಬಂಗಾರದ ಕನಸು ನನಸು ಮಾಡಿಕೊಂಡಿದ್ದಾರೆ.
ಭಾರತದ ದಂತಕತೆ ಪ್ರಕಾಶ್ ಪಡುಕೋಣೆ ಅವರು 1983ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಎನಿಸಿದ್ದರು. ಸದ್ಯ 26 ವರ್ಷಗಳ ನಂತರ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ.
