ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದ ಕನಕದುರ್ಗಾಗೆ ಕುಟುಂಬ ಸದಸ್ಯರಿಂದ ಬಹಿಷ್ಕಾರ.. – Vishwanews24

Featured, ರಾಷ್ಟ್ರ ನ್ಯೂಸ್

ತಿರುವನಂತಪುರಂ: ಸುಪ್ರೀಮ್ ಕೋರ್ಟ್ ತೀರ್ಮಾನದಂತೆ ಹಲವು ವಿಧದ ವಿರೋಧಗಳ ನಡುವೆಯೂ ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ತನ್ನ ಅತ್ತೆಯಿಂದಲೇ ಹಲ್ಲೆಗೀಡಾಗಿ ಸುದ್ದಿಯಾಗಿದ್ದ ಕೇರಳದ ಕನಕದುರ್ಗ ಎಂಬ ಮಹಿಳೆಗೆ ಇದೀಗ ಕುಟುಂಬ ಸದಸ್ಯರು ಬಹಿಷ್ಕಾರ ಹಾಕಿದ್ದಾರೆ.

ಅತ್ತೆಯಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕುಟುಂಬ ಸದಸ್ಯರು ಮನೆ ಪ್ರವೇಶಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಈಗ ಕನಕದುರ್ಗ ಸರ್ಕಾರದ ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದಾರೆ.

ಡಿಸೆಂಬರ್ 22 ರಂದು ತಿರುವನಂತಪುರಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತೇನೆ ಎಂದು ಕನಕದುರ್ಗ ಸುಳ್ಳು ಹೇಳಿ ದೇವಾಲಯವನ್ನು ಪ್ರವೇಶಿಸಿದ್ದರು. ಭಕ್ತರ ವಿರೋಧದ ಮಧ್ಯೆ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ಕೋಪಗೊಂಡಿರುವ ಅತ್ತೆ ಮತ್ತು ಮಾವ ಕನಕ ದುರ್ಗ ಅವರಿಗೆ ಮನೆಯ ಪ್ರವೇಶವನ್ನು ನಿರಾಕರಿಸಿ ಹೊರದಬ್ಬಿದ್ದಾರೆ.

ಕನಕದುರ್ಗಾ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸಿದ್ದನ್ನು ವಿರೋಧಿಸಿ ಆಕೆಯ ಅತ್ತೆ ಹಲ್ಲೆ ಮಾಡಿದ್ದರು. ಆಕೆಯ ಸೋದರ ಭರತ್ ಭೂಷಣ್ ಕೂಡ ವಿರೋಧಿಸಿದ್ದರು. ಪತಿಯ ಮನೆಯಿಂದ ಹೊರಹಾಕಲ್ಪಟ್ಟ ಕನಕದುರ್ಗಗೆ  ತನ್ನ ಅಣ್ಣ ಭರತ್ ಕೂಡ ಆಶ್ರಯ ನೀಡಲಿಲ್ಲ. ತನ್ನ ಮನೆಗೆ ಕಾಲಿಡದಂತೆ ಅಣ್ಣ ಕೂಡ ತಾಕೀತು ಮಾಡಿದ್ದಾರೆ.

ಅಯ್ಯಪ್ಪ ದೇವಾಲಯದ ಸಂಪ್ರದಾಯವನ್ನು ಮುರಿದಿದ್ದಕ್ಕೆ ಕನಕದುರ್ಗ ಸಾರ್ವಜನಿಕವಾಗಿ ಹಿಂದೂ ಸಮುದಾಯ ಮತ್ತು ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕ್ಷಮೆ ಕೇಳದ ಹೊರತು ಆಕೆಯನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.