ಶಬರಿಮಲೆ ವಿವಾದ : ಸುಪ್ರೀಂ ತೀರ್ಪಿಗೆ ನಾವು ಬದ್ಧ; ಶಬರಿಮಲೆ ದೇವಸ್ಥಾನದ ಆಡಳಿತ ಮಂಡಳಿ – Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್​​ ನೀಡಿದ್ದ ತೀರ್ಪಿಗೆ ನಾವು ಬದ್ಧವಾಗಿದ್ದೇವೆ ಎಂದು ಅಯ್ಯಪ್ಪ ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ಜತೆಗೆ ಕೋರ್ಟ್​​ ಆದೇಶದಂತೆಯೇ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಇಂದು ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶ ನೀಡಿದ್ದ ಸುಪ್ರೀಂ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರು ಪರಿಶೀಲನಾ ಅರ್ಜಿ ವಿಚಾರಣೆ ವೇಳೆ, ಮರುಪರಿಶೀಲನೆಯ ಅಗತ್ಯವಿಲ್ಲ ಎಂದು ಶಬರಿಮಲೆ ಅಯ್ಯಪ್ಪ ದೇಗುಲ ಆಡಳಿತ ಮಂಡಳಿ ಕೋರ್ಟ್ ತಿಳಿಸಿದೆ.

ಸುಪ್ರೀಂಕೋರ್ಟ್ ಮುಖ್ಯನಾಯಾಧೀಶ ರಂಜನ್ ಗೊಗೋಯ್ ಅವರ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಇಂದು ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ವಿಚಾರಣೆ ನಡೆಸಿತು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ, ನಾವು ನಮ್ಮ ನಿಲುವನ್ನು ಬದಲಾಯಿಸಿದ್ದೇವೆ. ಧರ್ಮ ಗ್ರಂಥದಲ್ಲಿ ಸ್ತ್ರೀಯರನ್ನು ಹೊರಗಿಡಬೇಕೆಂದು ಹೇಳಿಲ್ಲ. ಹೀಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಎಲ್ಲಾ ಸ್ತ್ರೀಯರಿಗೆ ಪ್ರವೇಶಕ್ಕೆ ಅವಕಾಶ ನೀಡುತ್ತೇವೆ ಎಂದು ಹೇಳಿಕೆ ನೀಡಿದೆ.