ಶೀಘ್ರವೇ ಅಯೋಧ್ಯೆಯಲ್ಲಿ ಜಗತ್ತಿನ ಅತಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣ : ಯೋಗಿ ಆದಿತ್ಯನಾಥ್ -Vishwanews24

Featured, ರಾಷ್ಟ್ರ ನ್ಯೂಸ್

ಲಖನೌ : ಅಯೋಧ್ಯೆಯಲ್ಲಿ ಶ್ರೀರಾಮನ 251 ಮೀಟರ್ ಎತ್ತರದ ಪ್ರತಿಮೆ ನಿರ್ಮಾಣ ಮಾಡುವ ಯೋಜನೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅನುಮೋದನೆ ನೀಡಿದ್ದಾರೆ.

ಶಕ್ತಿ ಸಮಿತಿ ಸಭೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಅಯೋಧ್ಯೆಯಲ್ಲಿರುವ ಸರಯೂ ನದಿ ಸಮೀಪದಲ್ಲಿ ಸುಮಾರು 100 ಹೆಕ್ಟೇರ್ ಪ್ರದೇಶದಲ್ಲಿ ಶ್ರೀರಾಮನ ಪ್ರತಿಮೆ ನಿರ್ಮಾಣವಾಗಲಿದೆ. ಸದ್ಯದಲ್ಲೇ ಪ್ರತಿಮೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಮನ ಪ್ರತಿಮೆ ನಿರ್ಮಾಣಕ್ಕಾಗಿ ಗುಜರಾತ್ ಸರ್ಕಾರದಿಂದ ತಾಂತ್ರಿಕ ಸಹಾಯ ಹಾಗೂ ಮಾರ್ಗದರ್ಶನ ಪಡೆಯಲು ನಾವು ತೀರ್ಮಾನಿಸಿದ್ದು, ಈ ಸಂಬಂಧ ಗುಜರಾತ್ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ನಿರ್ಧರಿಸಿದೆ. ಶ್ರೀರಾಮನ ಥೀಮ್ ಗಳನ್ನೊಳಗೊಂಡ ಡಿಜಿಟಲ್ ಮ್ಯೂಸಿಯಂ, ವಿಶ್ಲೇಷಣಾ ಕೇಂದ್ರ, ಪುಸ್ತಕಾಲಯ, ಪಾರ್ಕಿಂಗ್, ಆಹಾರ ಮಳಿಗೆಗಳೆಲ್ಲ ಅಯೋಧ್ಯೆ ಅಭಿವೃದ್ಧಿ ಯೋಜನೆಯಲ್ಲಿ ಒಳಗೊಂಡಿರುತ್ತದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ನರ್ಮದಾ ಸರೋವರದ ದಡದಲ್ಲಿರುವ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ 182 ಮೀಟರ್​ ಎತ್ತರದ ಏಕತಾಮೂರ್ತಿ ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆಯಾಗಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಿದ್ದಾರೆ. 251 ಮೀಟರ್​ ಎತ್ತರ ರಾಮನ ಮೂರ್ತಿ ನಿರ್ಮಾಣವಾದರೆ ಅದು ಏಕತಾ ಮೂರ್ತಿಯ ಎತ್ತರವನ್ನೂ ಮೀರಿಸಲಿದೆ.