ಸಂವಿಧಾನ ಮೀರಿ ವರ್ತಿಸುತ್ತಿರುವ ಕೆಲವು ಸಂಘಟನೆಗಳ ವಿರುದ್ಧ ಮುಖ್ಯಮಂತ್ರಿ ಕ್ರಮ ತೆಗೆದುಕೊಳ್ಳಬೇಕು : ಹೆಚ್.ವಿಶ್ವನಾಥ್ ಆಗ್ರಹ – Vishwanews24
ರಾಜ್ಯದಲ್ಲಿ ಸರ್ಕಾರ ಇರುವುದು ಬಿಜೆಪಿಯದ್ದು, RSS, VHP ಬಜರಂಗದಳದಲ್ಲ
ಟಿಪ್ಪು ಸುಲ್ತಾನ್ ವೀರ ಸೇನಾನಿ, ಸೂರ್ಯ – ಚಂದ್ರ ಇರುವವರೆಗೂ ಟಿಪ್ಪು ಸುಲ್ತಾನ್ ಇರ್ತಾರೆ..
ಇತಿಹಾಸ ತಿರುಚುವುದು ಒಳ್ಳೆ ಬೆಳವಣಿಗೆಯಲ್ಲ..
ನವದೆಹಲಿ: ರಾಜ್ಯದಲ್ಲಿ ಸರ್ಕಾರ ಇರುವುದು ಬಿಜೆಪಿಯದ್ದು, RSS, VHP ಬಜರಂಗದಳದಲ್ಲ, ಸಂವಿಧಾನ ಮೀರಿ ವರ್ತಿಸುತ್ತಿರುವ ಕೆಲವು ಸಂಘಟನೆಗಳ ವಿರುದ್ಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕ್ರಮ ತೆಗೆದುಕೊಳ್ಳಬೇಕು ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ನಾನು ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಆದರೆ ಇಂದು ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಬೇಸರವಾಗಿದೆ. ನಾನು ಬಿಜೆಪಿಯನ್ನು ಪ್ರತಿನಿಧಿಸುತ್ತೇನೆ. ಹಾಗಂತ ಎಲ್ಲವನ್ನೂ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದರು.
ಹಿಜಬ್ನಿಂದ ಆರಂಭವಾಗಿ ಈಗ ಪಠ್ಯಪುಸ್ತಕವನ್ನೇ ತಿರುಚಲಾಗುತ್ತಿದೆ. ರೋಹಿತ್ ಚಕ್ರತೀರ್ಥ ಹಿನ್ನೆಲೆ ಏನು?, ಎಷ್ಟು ವರ್ಷ ಪಾಠ ಮಾಡಿದ್ದಾರೆ? ಅವರಿಗೆ ಇತಿಹಾಸ ಎಷ್ಟು ಗೊತ್ತಿದೆ..? ಕೇವಲ ಕೆಲವು ನಾಯಕರ ಪರ ಕೆಲಸ ಮಾಡಿದರು ಎನ್ನುವ ಕಾರಣಕ್ಕೆ ಅವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿ ನೇಮಿಸಿದ್ದಾರೆ. ಅವರು ಇಂದು ಟಿಪ್ಪು ಸುಲ್ತಾನ್ ಒಂದು ಇತಿಹಾಸ ಬದಲಿಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಿಪ್ಪು ಸುಲ್ತಾನ್ ವೀರ ಸೇನಾನಿ, ಸೂರ್ಯ – ಚಂದ್ರ ಇರುವವರೆಗೂ ಟಿಪ್ಪು ಸುಲ್ತಾನ್ ಇರ್ತಾರೆ, ಇತಿಹಾಸ ಬದಲಿಸಲು ಯಾರಿಂದಲು ಸಾಧ್ಯವಿಲ್ಲ. ಟಿಪ್ಪು, ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ವಿರುದ್ಧ ಮೊದಲು ಧ್ವನಿ ಎತ್ತಿದ್ದವರು. ಅವರ ಬಗ್ಗೆ ಬೇಕಾಬಿಟ್ಟಿ ಮಾತನಾಡುವುದು ಸರಿಯಲ್ಲ. ಇತಿಹಾಸ ತಿರುಚುವುದು ಒಳ್ಳೆ ಬೆಳವಣಿಗೆಯಲ್ಲ ಎಂದು ವಾಗ್ದಾಳಿ ನಡೆಸಿದರು.
