ಸರ್ಕಾರ ಹೋದರೂ ಪಕ್ಷ ಉಳಿಸುವ ಕೆಲಸವನ್ನು ನಾವು ಮಾಡುತ್ತೇವೆ. ಮತ್ತೆ ಪಕ್ಷ ಸಂಘಟನೆ ಮಾಡಿ ಬಲಗೊಳಿಸುತ್ತೇವೆ : ದೇವೇಗೌಡ -Vishwanews24
ಬೆಂಗಳೂರು: ಅಧಿಕಾರ ಕಳೆದುಕೊಂಡ ಮಾತ್ರಕ್ಕೆ ಜೆಡಿಎಸ್ಅನ್ನು ಮುಗಿಸಲು ಸಾಧ್ಯವಿಲ್ಲ. ಸರ್ಕಾರ ಹೋದರೂ ಪಕ್ಷ ಉಳಿಸುವ ಕೆಲಸವನ್ನು ನಾವು ಮಾಡುತ್ತೇವೆ. ಮತ್ತೆ ಪಕ್ಷ ಸಂಘಟನೆ ಮಾಡಿ ಬಲಗೊಳಿಸುತ್ತೇವೆ ಎಂಬ ವಿಶ್ವಾಸವನ್ನು ಜೆಡಿಎಸ್ ವರಿಷ್ಠ ದೇವೇಗೌಡ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಹೆಚ್ ಡಿಡಿ, ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಅತೃಪ್ತ ಶಾಸಕರಿಗೆ ನೆಮ್ಮದಿಯಿಂದ ಇರಲು ಬಿಡುವುದಿಲ್ಲ.ಯಾರೇ ಏನೇ ಮಾಡಿದರೂ ಜೆಡಿಎಸ್ ಪಕ್ಷವನ್ನು ಮುಗಿಸಲಾಗಲ್ಲ, ಸಿಎಂ ಆಗಿ ಕುಮಾರಸ್ವಾಮಿ ನೋವು ತಿಂದಿದ್ದಾರೆ. ಎಷ್ಟು ಕಷ್ಟಪಟ್ಟಿದ್ದಾರೆ ಎಲ್ಲಾ ಗೊತ್ತಿದೆ.
14 ತಿಂಗಳು ಆಡಳಿತ ನಡೆಸಿ ಮನೆಗೆ ಹೋಗಬೇಕಲ್ಲ ಎಂಬ ನೋವು ಕಾಂಗ್ರೆಸ್ಗೂ ಇದೆ. ಸರ್ಕಾರ ಹೋಗಿದೆ ಏನು ಮಾಡಲು ಸಾಧ್ಯವಿಲ್ಲ. ಆದರೆ ಪಕ್ಷ ಇದೆ. ಅದನ್ನು ಸಂಘಟನೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಸೋತ ಬಳಿಕ ನನ್ನ ಗುರಿ ಪಕ್ಷ ಸಂಘಟನೆ ಎಂಬುದನ್ನು ನಿರ್ಧರಿಸಿದ್ದೆ, ಅದರಂತೆ ಪಕ್ಷವನ್ನು ಬಲಗೊಳಿಸುತ್ತೇನೆ. ಇದಕ್ಕಾಗಿ ಆ.7ರಂದು ಅರಮನೆ ಆವರಣದಲ್ಲಿ ಕಾರ್ಯಕರ್ತರ ಸಮಾವೇಶ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಈಗಲೇ ಸಿದ್ದರಾಗಬೇಕು. ಕುಮಾರಸ್ವಾಮಿ ಸರ್ಕಾರದ ಸಾಲಮನ್ನಾ, ಬಡವರ ಬಂಧು, ಋಣಮುಕ್ತ ಕಾಯ್ದೆ ಬಗ್ಗೆ ಮನೆ ಮನೆಗೆ ಪ್ರಚಾರ ನಡೆಸಿ ಜನರ ಬಳಿ ಹೋಗುತ್ತೇವೆ ಎಂದರು.
ವಿಷಯಾಧಾರಿತವಾಗಿ ನಾವು ಬಿಜೆಪಿಗೆ ಬೆಂಬಲ ಕೊಡುತ್ತೇವೆ. ಹಣಕಾಸು ವಿಧೇಯಕಕ್ಕೆ ನಮ್ಮ ಬೆಂಬಲ ಇರುತ್ತದೆ. ಎಲ್ಲರೂ ಸರ್ವಾನುಮತದಿಂದ ಒಪ್ಪಿದರೆ ಬೆಂಬಲ ನೀಡುತ್ತೇವೆ ಎಂದರು.

