ಸರ್ಕಾರಿ ಭರವಸೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ರಾಜೀನಾಮೆ -Vishwanews24
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಮತ್ತೊಂದು ವಿಕೆಟ್ ಪತನಗೊಂಡಿದ್ದು, ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರಕಲಗೂಡು ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ರಾಜೀನಾಮೆ ನೀಡಿದ್ದಾರೆ.
ರಾಮಸ್ವಾಮಿ ಅವರು ಈಗಾಗಲೇ ತನ್ನ ರಾಜೀನಾಮೆ ಪತ್ರವನ್ನು ಸ್ಪೀಕರ್ ಮತ್ತು ಮುಖ್ಯಮಂತ್ರಿಗೆ ರವಾನಿಸಿದ್ದಾರೆ.
ಕೆಂಗೇರಿ ಸಮೀಪದ ಬಿಎಂ ಕಾವಲು ಪ್ರದೇಶದಲ್ಲಿ 305 ಎಕರೆ ಭೂಗಳ್ಳರ ಪಾಲಾಗಿದೆ. ಭೂಗಳ್ಳರಿಂದ ಸರ್ಕಾರಿ ಭೂಮಿ ವಶಕ್ಕೆ ಪಡೆಯಲು ಮೈತ್ರಿ ಸರ್ಕಾರ ಹಿಂದೆ ಸರಿದಿದೆ. ಅಲ್ಲದೆ 300 ಎಕರೆಗೂ ಹೆಚ್ಚು ಭೂಮಿ ತೆರವಿಗೆ ಸರ್ಕಾರ ಮುಂದಾಗಲಿಲ್ಲ. ಇದರಿಂದ ಬೇಸರಗೊಂಡು ರಾಮಸ್ವಾಮಿ ಅವರು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಸಮಿತಿ ಸಭೆಯಲ್ಲಿ ಬಿ. ಎಂ ಕಾವಲ್ ಪ್ರಕರಣ ಚರ್ಚೆಯವಿಷಯವಾಗಿತ್ತು. ಪ್ರಕರಣದಲ್ಲಿ ಅಕ್ರಮ ನಡೆದಿರುವುದು ಸತ್ಯವಾದರೂ ಅಧಿಕಾರಿಗಳು ಹಾಗೂ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬೇಸರಗೊಂಡು ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಯುಎನ್ಐ ಸುದ್ದಿ ಸಂಸ್ಥೆಗೆ ಎ.ಟಿ. ರಾಮಸ್ವಾಮಿ ತಿಳಿಸಿದ್ದಾರೆ.
ಎ ಟಿ ರಾಮಸ್ವಾಮಿ ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದಾರೆ
