ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡ ಕಾನ್ಸ್ಟೇಬಲ್ಗಳಿಂದ ಡ್ರಗ್ ವ್ಯಾಪಾರ: ಇಬ್ಬರ ಬಂಧನ – Vishwanews24
ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡ ಕಾನ್ಸ್ಟೇಬಲ್ಗಳಿಂದ ಡ್ರಗ್ ವ್ಯಾಪಾರ: ಇಬ್ಬರ ಬಂಧನ – Vishwanews24
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಹೆಚ್ಚುವರಿ ಗಳಿಕೆಗಾಗಿ ಗಾಂಜಾ ವ್ಯಾಪಾರ ಮಾಡಿ ಸಿಕ್ಕಿಬಿದ್ದಿದ್ದಾರೆ. ಡ್ರಗ್ ಪೆಡ್ಲರ್ಗಳಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸ್ ಕಾನ್ ಸ್ಟೇಬಲ್ಗಳನ್ನು ಬಂಧಿಸಲಾಗಿದೆ.
ಶಿವಕುಮಾರ್ ಮತ್ತು ಸಂತೋಷ್ ಬಂಧಿತ ಕಾನ್ಸ್ಟೇಬಲ್ಗಳು. ಇವರಿಬ್ಬರು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು.


ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭದ್ರತೆಗೆಂದು ಸಂತೋಷ್ ಮತ್ತು ಶಿವಕುಮಾರ್ ನಿಯೋಜನೆಗೊಂಡಿದ್ದರು. ಈ ಮೊದಲು ಡ್ರಗ್ ಪೆಡ್ಲರ್ಗಳ ಜತೆ ಸಂಪರ್ಕ ಹೊಂದಿದ್ದ ಕಾನ್ಸ್ಟೇಬಲ್ ಗಳು ಮಾದಕ ವಸ್ತು ತರಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು. ಒಮ್ಮೆ ಸಿಸಿಬಿ ಪೊಲೀಸರ ಕೈಗೂ ಸಿಕ್ಕಿಬಿದ್ದಿದ್ದರು ಎನ್ನಲಾಗಿದೆ. ಆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯ ಭದ್ರತೆಗೆ ನಿಯೋಜನೆಗೊಂಡಿದ್ದರು.
ಅಖಿಲ್ ರಾಜ್ ಮತ್ತು ಅಮ್ಜದ್ ಎಂಬ ಡ್ರಗ್ ಪೆಡ್ಲರ್ಗಳ ಬಳಿ ಗಾಂಜಾ ಖರೀದಿ ಮಾಡಿದ್ದ ಸಂತೋಷ್ ಮತ್ತು ಶಿವಕುಮಾರ್ ಹಣ ಕೊಟ್ಟಿರಲಿಲ್ಲ. ಕೇಳಿದರೆ, ನಾವು ಪೊಲೀಸರು ಎಂದು ಹೆದರಿಸಿದ್ದರು. ಈ ವಿಚಾರವಾಗಿ ಪೆಡ್ಲರ್ಗಳ ಜತೆ ಜಗಳ ನಡೆದು ಹಲ್ಲೆಗೆ ಮುಂದಾಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಆರ್.ಟಿ. ನಗರ ಹೊಯ್ಸಳ ಸಿಬ್ಬಂದಿ ಇಬ್ಬರು ಪೊಲೀಸ್ ಪೇದೆಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇಬ್ಬರು ಗಾಂಜಾ ಪೆಡ್ಲರ್ಗಳು ಸೇರಿ ನಾಲ್ವರನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿಗಳ ಮನೆ ಭದ್ರತೆಗೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿಯೇ ಮಾದಕ ವಸ್ತು ಮಾರಾಟ ಮಾಡಿ ಸಿಕ್ಕಿಬಿದ್ದಿರುವುದನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
