ಸಿದ್ದರಾಮಯ್ಯ ಅವರಿಂದ ನಾನು ಮುಖ್ಯಮಂತ್ರಿ ಆಗಿಲ್ಲ : ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ರಾಮನಗರ: ಸಿದ್ದರಾಮಯ್ಯ ಅವರಿಂದ ನಾನು ಮುಖ್ಯಮಂತ್ರಿ ಆಗಿಲ್ಲ. ರಾಮನಗರದ ಜನ ನನ್ನನ್ನು ಬೆಳೆಸಿರುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ಮುಂದುವರಿಸಿದ್ದಾರೆ.

ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರ ಸಂಬಂಧ ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದನ್ನು ಸಿದ್ದರಾಮಯ್ಯನವರು ಎಷ್ಟರಮಟ್ಟಿಗೆ ಸಹಿಸಿಕೊಂಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅವರ ಪಕ್ಷದ ಶಾಸಕರ ಬಳಿಯೇ, ಪಾರ್ಲಿಮೆಂಟ್ ಚುನಾವಣೆಯ ನಂತರ ಈ ಸರ್ಕಾರ ಒಂದು ಸೆಕೆಂಡ್ ಇರಲು ಬಿಡಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅವರಿಂದ ನಾನು ಮುಖ್ಯಮಂತ್ರಿಯಾಗಿಲ್ಲ. ಕಾಂಗ್ರೆಸ್ಸಿನ ಹೈಕಮಾಂಡ್ ಅವರು ತೀರ್ಮಾನ ತೆಗೆದುಕೊಂಡರು. ಅವರು ತೆಗೆದುಕೊಂಡ ತೀರ್ಮಾನವನ್ನು ಸಿದ್ದರಾಮಯ್ಯರು ಸಹಿಸಿಕೊಂಡಿಲ್ಲ. ಇಲ್ಲದಿದ್ದರೆ ಈ ಸರ್ಕಾರ ಹೋಗುತ್ತಿತ್ತಾ, ಹೋಗೋದಕ್ಕೆ ಕಾರಣ ಯಾರು, ಯಾರು ಯಾರು ಏನೇನು ಚರ್ಚೆ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ವೆ ಎಂದು ಪ್ರಶ್ನಿಸಿದ ಅವರು, ನಾನು ಸಿದ್ದರಾಮಯ್ಯ ಸಾಕಿದ ಗಿಣಿ ಅಲ್ಲ. ನನ್ನನ್ನು ಈ ರಾಮನಗರ ಜಿಲ್ಲೆಯ ಜನರು ಸಾಕಿದ್ದಾರೆ. ಈ ಜಿಲ್ಲೆಯ ಜನ ಕೊಟ್ಟಿರುವಂತಹ ಶಕ್ತಿ ಉಪಯೋಗಿಸಿ ಕೊಂಡು ಈ ರಾಜ್ಯದ ರಾಜಕಾರಣದಲ್ಲಿ ಬೆಳೆದಿದ್ದೇನೆ ಎಂದರು.