ಸಿದ್ದರಾಮಯ್ಯ ನಡೆಗೆ ಕಾಂಗ್ರೆಸ್ ಕಕ್ಕಾಬಿಕ್ಕಿ !!

Featured, ರಾಜ್ಯ ನ್ಯೂಸ್

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನಡೆ ಕಾಂಗ್ರೆಸ್ ನಾಯಕತ್ವವನ್ನು ಕಕ್ಕಾಬಿಕ್ಕಿಗೊಳಿಸಿದೆ. ಸಮ್ಮಿಶ್ರ ಸರ್ಕಾರದ ಸಂಪುಟ ರಚನೆ ಬಳಿಕ ಉಂಟಾದ ಗೊಂದಲ ಪರಿಹಾರಕ್ಕೆ ನಿಯೋಜನೆಗೊಂಡಿದ್ದ ಅವರು, ಪಕ್ಷ ಒಡೆದ ಮನೆಯಂತಾಗಿದ್ದರೂ ಅಸಮಾಧಾನ ಶಮನಗೊಳಿಸುವ ಬದಲು ಚಿಕಿತ್ಸೆ ನೆಪದಲ್ಲಿ ಧರ್ಮಸ್ಥಳ ಕಡೆ ಮುಖಮಾಡಿರುವುದು ಪಕ್ಷದ ನಾಯಕರನ್ನು ಕಂಗಾಲುಗೊಳಿಸಿದೆ.

ಪಕ್ಷದಲ್ಲಿ ಬಂಡಾಯ ಏರುಗತಿಯಲ್ಲಿದ್ದಾಗಲೂ ಸಿದ್ದರಾಮಯ್ಯ ತಮ್ಮ ಕ್ಷೇತ್ರ ಬಾದಾಮಿಯಲ್ಲಿ ಐದು ದಿನ ಪ್ರವಾಸ ನಡೆಸಿದರೇ ಹೊರತು ಬೆಂಗಳೂರಿನ ಕಡೆ ತಲೆ ಹಾಕಲಿಲ್ಲ. ಈ ಬೆಳವಣಿಗೆಯನ್ನು ಗಮನಿಸಿದ ಹೈಕಮಾಂಡ್ ಬಂಡಾಯ ತಣಿಸಲು ಡಿ.ಕೆ.ಶಿವಕುಮಾರ್ ಅವರಿಗೆ ಜವಾಬ್ದಾರಿ ಕಟ್ಟಿತು. ಹಾಗೂ ಹೀಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರೇ ಪರಿಸ್ಥಿತಿ ನಿಭಾಯಿಸಿದರು. ಇದೀಗ ಎರಡನೇ ಸುತ್ತಿನ ಸಂಪುಟ ವಿಸ್ತರಣೆ, ನಿಗಮ, ಮಂಡಳಿ ನೇಮಕ ಸಂಬಂಧ ಪ್ರಕ್ರಿಯೆ ಚುರುಕಾಗಿ ನಡೆದಿದೆ. ಆಶ್ಚರ್ಯವೆಂದರೆ ಸಿದ್ದರಾಮಯ್ಯ ಜೂನ್ 17ರಂದು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ತೆರಳಲಿದ್ದು 12 ದಿನ ಅಲ್ಲೇ ಇರಲಿದ್ದಾರೆ. ಇದು ಕಾಂಗ್ರೆಸ್ ನಾಯಕರ ಸಿಟ್ಟಿಗೆ ಕಾರಣವಾಗಿದೆ. ಉಳಿದ ಐದು ಸಚಿವ ಸ್ಥಾನಕ್ಕೆ 20ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಎಂಟು ಹಿರಿಯ ನಾಯಕರೇ ಬಂಡೆದ್ದು ಪಕ್ಷಕ್ಕೆ ಮುಜುಗರ ತರುತ್ತಿರುವಾಗ ಸಿದ್ದರಾಮಯ್ಯ ನಡೆ ಸಾಕಷ್ಟು ಕುತೂಹಲವನ್ನೂ ಮೂಡಿಸಿದೆ.

ಸಮ್ಮಿಶ್ರ ಸರ್ಕಾರ ಸಾವಧಾನವಾಗಿ ನಡೆಯಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಲಾಗಿದ್ದು, ಇದೀಗ ಅವರು ಧರ್ಮಸ್ಥಳದಿಂದ ವಾಪಸಾಗುವವರೆಗೂ ಸಮನ್ವಯ ಸಮಿತಿ ಸಭೆ ಕೂಡ ನಡೆಯುವಂತಿಲ್ಲ. ಇದು ಜೆಡಿಎಸ್​ಗೂ ಇರಿಸುಮುರಿಸು ಉಂಟು ಮಾಡಿದೆ. ಸಿದ್ದರಾಮಯ್ಯ ಆಗಮನದ ಬಳಿಕ ಸಮನ್ವಯ ಸಮಿತಿ ಸಭೆ ನಡೆದು ಬಜೆಟ್​ಗೆ ಪೂರಕವಾಗಿ ಚರ್ಚೆ ನಡೆಯಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಜುಲೈ 5ರಂದು ಬಜೆಟ್ ಮಂಡನೆಯಾಗಬೇಕಿದೆ. ಈ ನಡುವೆ 6 ದಿನದಲ್ಲೇ 20 ನಿಗಮ ಮಂಡಳಿಗೆ ನೇಮಕವೂ ಆಗಬೇಕಿದೆ.