ಸಿದ್ದರಾಮಯ್ಯ ಮಂಗಳೂರು ಭೇಟಿಗೆ ನಿರ್ಬಂಧ : ಪೊಲೀಸ್ ಆಯುಕ್ತರಿಂದ ನೋಟೀಸ್ – Vishwanews24
ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವೇಶಿಸದಂತೆ ನಗರದ ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಅವರು ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ನಿಷೇಧ ಡಿ.22 ರ ಮಧ್ಯರಾತ್ರಿ ವರೆಗೆ ಜಾರಿಯಲ್ಲಿರುತ್ತದೆ.
ಬೆಂಗಳೂರು ,ಹುಬ್ಬಳ್ಳಿ, ಮೈಸೂರು, ಗೋವಾ ಏರ್ ಪೋರ್ಟ್ ನಿಂದ ಕರೆತರುವಂತಿಲ್ಲ ಹಾಗೂ ರಸ್ತೆ , ರೈಲು, ವಾಯುಯಾನದ ಮೂಲಕ ಮಂಗಳೂರಿಗೆ ಬರುವಂತಿಲ್ಲ, ಯಾರೂ ಅವರ ಪ್ರಯಾಣಕ್ಕೆ ಸಹಕರಿಸುವಂತಿಲ್ಲ ಎಂದು ನೋಟೀಸ್ ನಲ್ಲಿ ಉಲ್ಲೇಖಿಸಿ ನಿಷೇಧ ಹೇರಲಾಗಿದೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಗುರುವಾರ ನಡೆದ ಪ್ರತಿಭಟನೆ ಹಿಂಸಾತ್ಮಕ ಘಟನೆಗಳು ನಡೆದುದ್ದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕರ್ಫ್ಯೂ ಜಾರಿಗೊಳಿಸಲಾಗಿತ್ತು.

ಪೊಲೀಸ್ ನಿರೀಕ್ಷರು, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಇವರ ಆದೇಶದಂತೆ ಈ ನೋಟಿಸ್ ಜಾರಿ ಮಾಡಲಾಗಿದೆ ಎಂದು ಆಯುಕ್ತರು ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಮಂಗಳೂರಿಗೆ ತೆರಳಬೇಕಿತ್ತು. ಆದರೆ, ಅವರಿಗೆ ಪತ್ರ ಕಳುಹಿಸಿರುವ ಮಂಗಳೂರು ಪೊಲೀಸ್ ಆಯುಕ್ತರು, ಮಂಗಳೂರಿನಲ್ಲಿ ಡಿ. 22ರವರೆಗೂ ಕರ್ಫ್ಯೂ ಜಾರಿಯಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಇದೆ. ಹೀಗಾಗಿ, ಡಿ.22ರ ರಾತ್ರಿ 12ರವರೆಗೂ ತಾವು ಮಂಗಳೂರಿಗೆ ಬರುವಂತಿಲ್ಲ. ತಾವು ಇಲ್ಲಿಗೆ ಆಗಮಿಸುವುದರಿಂದ ಕಾನೂನು ಸುವ್ಯವಸ್ಥೆ, ಶಾಂತಿಗೆ ಭಂಗವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಮಂಗಳೂರು ನಗರಕ್ಕೆ ನಿರ್ಬಂಧ ವಿಧಿಸಲಾಗಿದೆ. ಯಾವುದೇ ರೀತಿಯ ಸಾರಿಗೆ ಸೌಲಭ್ಯ ನಿಷೇಧಗೊಳಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
