ಸಿಲಿಕಾನ್ ಸಿಟಿ ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಕೆ. ಅಣ್ಣಾಮಲೈ ಅಧಿಕಾರ ಸ್ವೀಕಾರ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಮತ್ತೊಬ್ಬ ದಕ್ಷ ಪೊಲೀಸ್ ಅಧಿಕಾರಿಯ ಎಂಟ್ರಿಯಾಗಿದೆ. ಕರ್ನಾಟಕ ಸಿಂಗಂ ಖ್ಯಾತಿಯ ಪೊಲೀಸ್ ಅಧಿಕಾರಿ ಕೆ.ಅಣ್ಣಾಮಲೈ ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಚಿಕ್ಕಮಗಳೂರು ಎಸ್ಪಿಯಾಗಿದ್ದ ಅಣ್ಣಾಮಲೈ ಖಡಕ್ ಅಫೀಸರ್ ಎಂದೇ ಹೆಸರಾಗಿದ್ದು, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯಲ್ಲಿ ನಿನ್ನೆ ನಿರ್ಗಮಿತ ಡಿಸಿಪಿ ಶರಣಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಸರ್ಕಾರದ ಆದೇಶದಂತೆ ಡಿಸಿಪಿಯಾಗಿ ವರ್ಗಾವಣೆಯಾಗಿದ್ದು, ತಮ್ಮ ಮೇಲೆ ಹೊಣೆಗಾರಿಕೆ ಹೆಚ್ಚಿದೆ ಎಂದು ತಿಳಿಸಿದರು.
ಅಪರಾಧ ಪ್ರಕರಣಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ , ದಕ್ಷ ಅಧಿಕಾರಿ ಎಂದೇ ರಾಜ್ಯಾದ್ಯಂತ ಹೆಸರಾಗಿರುವ ಚಿಕ್ಕಮಗಳೂರು ಎಸ್ಪಿಯಾಗಿದ್ದ ಕೆ. ಅಣ್ಣಾಮಲೈ ಅವರನ್ನು ಬೆಂಗಳೂರು ದಕ್ಷಿಣ ವಿಭಾಗೀಯ ಡಿಸಿಪಿಯಾಗಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪಶ್ಚಿಮ ವಲಯದಲ್ಲಿ ಈಗಾಗಲೇ ರವಿ ಚೆನ್ನಣ್ಣವರ್, ಡಿಸಿಪಿಯಾಗಿದ್ದು, ಮತ್ತೋರ್ವ ದಕ್ಷ ಅಧಿಕಾರ ಅಣ್ಣಾಮಲೈ ಅವರು ದಕ್ಷಿಣ ವಲಯದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಇದೀಗ ಸಿಲಿಕಾನ್ ಸಿಟಿ ರೌಡಿಗಳಲ್ಲಿ ನಡುಕು ಉಂಟಾಗಿದೆ.

