ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ದುಷ್ಟತನಕ್ಕೆ ರಾಹುಲ್ ಗಾಂಧಿ ಪ್ರಚೋದನೆ: ಕೆ.ಎಸ್. ನವೀನ್ ವಾಗ್ದಾಳಿ – vishwanews24
ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ದುಷ್ಟತನಕ್ಕೆ ರಾಹುಲ್ ಗಾಂಧಿ ಪ್ರಚೋದನೆ: ಕೆ.ಎಸ್. ನವೀನ್ ವಾಗ್ದಾಳಿ
ಉಡುಪಿ: ಸಂವಿಧಾನವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ದುಷ್ಟತನಕ್ಕೆ ರಾಹುಲ್ ಗಾಂಧಿ ಪ್ರಚೋದನೆ ನೀಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆದಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ವಕ್ತಾರ ಕೆ.ಎಸ್. ನವೀನ್ ವಾಗ್ದಾಳಿ ನಡೆಸಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ ಎಂದು ಕಾಂಗ್ರೆಸ್ ಸರ್ಕಾರದ ಸಚಿವರೇ ಒಪ್ಪಿಕೊಂಡಿದ್ದಾರೆ. ಆದರೂ ರಾಹುಲ್ ಗಾಂಧಿ ಯಾವುದೇ ದಾಖಲೆಗಳಿಲ್ಲದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಚುನಾವಣಾ ಆಯೋಗದ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದರು.
ರಾಹುಲ್ ಗಾಂಧಿ ಬೆಂಬಲದೊಂದಿಗೆ ಪ್ರತಿಭಟನೆ ನಡೆಸುತ್ತಿರುವ ಕೆಲವು ವಿದ್ಯಾರ್ಥಿ ಸಂಘಟನೆಗಳ ನಾಯಕರು ನೇಪಾಳ, ಬಾಂಗ್ಲಾದೇಶ ಹಾಗೂ ಯುರೋಪ್‌ನಲ್ಲಿ ನಡೆದ ದಂಗೆಗಳ ಮಾದರಿಯಲ್ಲಿ ಭಾರತದಲ್ಲಿಯೂ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಜನರನ್ನು ದಾರಿ ತಪ್ಪಿಸುವ ಕೆಲಸವನ್ನು ರಾಹುಲ್ ಗಾಂಧಿ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದ ಪರಿಸ್ಥಿತಿ ಹೇಗಿತ್ತು ಎಂಬ ಅರಿವು ಇಂದಿನ ಯುವಜನರಿಗೆ ಇಲ್ಲ. ಮುಗ್ಧ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ, ಅವರನ್ನು ದೇಶದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿ ಸಮುದಾಯವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಕೆ.ಎಸ್. ನವೀನ್ ವಾಗ್ದಾಳಿ ನಡೆಸಿದರು.
