ಸುಳ್ಳು ಆರೋಪಗಳ ವಿಷ ಕುಡಿದು, ಕುಡಿದು ನಾನು ವಿಷಕಂಠನಾಗಿದ್ದೇನೆ , ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ : ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು : ಸಿದ್ದರಾಮಯ್ಯನವರೇ ನಮ್ಮ ನಾಯಕರು, ಅವರಿಂದಾಗಿಯೇ ನಾವು ರಾಜೀನಾಮೆ ಕೊಟ್ಟಿರುವುದು ಎಂದು ಅತೃಪ್ತ ಶಾಸಕರ ಹೇಳಿಕೆಗಳು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಸಿದ್ದರಾಮಯ್ಯನವರು ನಮ್ಮ ನಾಯಕರು, ಅವರಿಂದಾಗಿಯೇ ನಾವು ರಾಜೀನಾಮೆ ಕೊಟ್ಟಿರುವುದು’ ಎಂದು ಕೆಲವು ಅತೃಪ್ತ ಶಾಸಕರು ನೀಡಿದ್ದಾರೆನ್ನಲಾದ ಹೇಳಿಕೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ. ಈ ಮಾತನ್ನು ಅವರು ನನ್ನ ಮುಂದೆ ಬಂದು ಹೇಳಲಿ ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ ಎಂದಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೂಡಾ ನನ್ನ ಮೇಲೆ ಸುಳ್ಳು ಆರೋಪಗಳ ಸುರಿ ಮಳೆ ಆಗಿವೆ. ನನ್ನ ರಾಜಕೀಯ ಜೀವನದಲ್ಲಿ ಇವೆಲ್ಲ ಮೊದಲನೆಯದಲ್ಲ. ಬಹುಶ: ಕೊನೆಯದೂ ಅಲ್ಲ. ಇಂತಹ ಸುಳ್ಳು ಆರೋಪಗಳ ವಿಷ ಕುಡಿದು, ಕುಡಿದು ನಾನು ವಿಷಕಂಠನಾಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯನವರು ನಮ್ಮ ನಾಯಕರು ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಿದ್ದರೆ ಅವರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ದುರುದ್ದೇಶ ಇರಬಹುದು. ಅವರು ನೀಡದೆ ಇದ್ದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದರೆ ಇದರ ಹಿಂದೆ ಯಾರೋ ಸಂಚುಕೋರರು ಇದ್ದಾರೆಂದು ಅರ್ಥ. ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ. ಕೊನೆಗೆ ಸತ್ಯವೇ ಗೆಲ್ಲುವುದು. ಸತ್ಯಮೇವ ಜಯತೇ ಎಂದು ಹೇಳಿದ್ದಾರೆ.