ಸೆ.20ರಿಂದ 108 ಅಂಬುಲೆನ್ಸ್ ಸೇವೆ ಬಂದ್ : ನೌಕರರಿಂದ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ – vishwanews24
ಸೆ.20 ರಿಂದ 108 ಸೇವೆ ಬಂದ್ ; ಸರ್ಕಾರಕ್ಕೆ ಸಿಬ್ಬಂದಿ ಡೆಡ್‌ಲೈನ್..
3,500 ನೌಕರರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 108 ಅಂಬುಲೆನ್ಸ್ ನೌಕರರು ಮುಷ್ಕರದ ಎಚ್ಚರಿಕೆ ನೀಡಿದ್ದಾರೆ.
ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ 15 ದಿನಗಳ ಗಡುವು ನೀಡಲಾಗಿದ್ದು, ಸೆಪ್ಟೆಂಬರ್ 20 ರಿಂದ ಸಾಮೂಹಿಕ ರಾಜೀನಾಮೆ ನೀಡಿ ಹೋರಾಟಕ್ಕಿಳಿಯುವುದಾಗಿ ಸಂಘಟನೆಗಳು ತಿಳಿಸಿವೆ.
ಇದನ್ನೂ ಓದಿ:
ಕಾಪು : ಬಿಜೆಪಿ ನೂತನ ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಶೇಖ್ ನಝೀರ್ ಅಹಮ್ಮದ್ ನೇಮಕ – vishwanews24
ಈ ಕುರಿತು ‘ಸುವರ್ಣ ಕರ್ನಾಟಕ ಆರೋಗ್ಯ ಕವಚ-108 ನೌಕರರ ಸಂಘ’ ಹಾಗೂ ‘ಕರ್ನಾಟಕ ರಾಜ್ಯ ಆರೋಗ್ಯ ಕವಚ ಆಂಬುಲೆನ್ಸ್ ನೌಕರರ ಸಂಘ’ದ ಪದಾಧಿಕಾರಿಗಳು ಆರೋಗ್ಯ ಸಚಿವರು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಜಿವಿಕೆ ಸಂಸ್ಥೆಯ ಅಧೀನದಲ್ಲಿ ಸುಮಾರು 35,000 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ನೌಕರರ ಬೇಡಿಕೆಗಳೇನು?
– ನೇಮಕಾತಿ ವೇಳೆ ಭರವಸೆ ನೀಡಿದಂತೆ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಬೇಕು. 2017 ರಿಂದ 2022ರ ವರೆಗೆ ಯಾವುದೇ ವೇತನ ಹೆಚ್ಚಳವಾಗಿಲ್ಲ.
⚫ 3 ಪಾಳಿಗಳಲ್ಲಿ ಆಂಬುಲೆನ್ಸ್ ವಾಹನದ ಸೌಕರ್ಯ ಒದಗಿಸಬೇಕು.
⚫ ವಲಯವಾರು ವಿಂಗಡಣೆ ಮಾಡಿ ನಿಗದಿಪಡಿಸಿರುವ ವೇತನವನ್ನು ರದ್ದುಪಡಿಸಿ, ಎಲ್ಲರಿಗೂ ಏಕರೂಪ ವೇತನ ಜಾರಿಗೊಳಿಸಬೇಕು ಹಾಗೂ ಜ್ಯೇಷ್ಠತೆ ಆಧಾರದ ಮೇಲೆ ವೇತನ ನಿಗದಿ ಮಾಡಬೇಕು.
⚫ ಕಾರ್ಮಿಕ ಇಲಾಖೆಯ ನಿಯಮಾವಳಿಯಂತೆ ಪ್ರತಿ ತಿಂಗಳ 7ನೇ ತಾರೀಖಿನ ಒಳಗೆ ವೇತನ ಪಾವತಿಸಬೇಕು.
⚫ ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು.
⚫ ಎಲ್ಲಾ ಕೆಲಸದ ಸ್ಥಳಗಳಲ್ಲಿ ಶೌಚಾಲಯ, ವಿಶ್ರಾಂತಿ ಕೊಠಡಿ ಹಾಗೂ ಅಂಬುಲೆನ್ಸ್ ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಕಲ್ಪಿಸಬೇಕು.
ಕಠಿಣ ಕ್ರಮ:
ಮುಷ್ಕರದಿಂದಾಗಿ ರೋಗಿಗಳಿಗೆ ಯಾವುದೇ ತೊಂದರೆಯಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯುಟಿ ಖಾದರ್ ಎಚ್ಚರಿಸಿದ್ದಾರೆ. ಚಾಲಕರಿಗೆ ಸಮಸ್ಯೆಗಳಿದ್ದರೆ ಸಂಬಂಧಪಟ್ಟ ಸೇವಾ ಸಂಸ್ಥೆಯೊಂದಿಗೆ ಮಾತುಕತೆ ನಡೆಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
