ಸೆ.20ರೊಳಗಾಗಿ ಮರಳು ದಿಬ್ಬ ತೆರವು ಮಾಡಲು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಶಾಸಕ ರಘುಪತಿ ಭಟ್ -Vishwanews24

Featured, ಉಡುಪಿ

ಉಡುಪಿ: ಸಿಆರ್‌ಝಡ್ ವ್ಯಾಪ್ತಿಯಲ್ಲಿ ಸೆ.20ರೊಳಗಾಗಿ ಮರಳು ದಿಬ್ಬ ತೆರವು ಮಾಡಲು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಶಾಸಕ ರಘುಪತಿ ಭಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಎಲ್ಲ ಶಾಸಕರು ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಭೇಟಿ ಮಾಡಿ, ಸೆ.15ರೊಳಗೆ ಏಳು ಸದಸ್ಯರ ಸಮಿತಿ ಸಭೆ ನಡೆಸಿ ಹಿಂದಿನ ಪದ್ಧತಿಯಲ್ಲಿ ಎಫ್‌ಐಆರ್ ಆಗಿರುವವರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಪರವಾನಗಿ ನೀಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸ್ಯಾಂಡ್ ಬಜಾರ್ ಆ್ಯಪ್ ಮೂಲಕ ವಹಿವಾಟು ನಡೆಸಲು ಮೂರು ತಿಂಗಳ ಸಮಯಾವಕಾಶ ಕೇಳಲಾಗಿದೆ.

ಇದಕ್ಕೆ ಗಣಿ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್ ಸಮ್ಮತಿ ಸೂಚಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶದಂತೆ ದರ ನಿಗದಿ ಮಾಡಲಾಗುವುದು. ಈಗಾಗಲೇ 8.7 ಲಕ್ಷ ಮೆಟ್ರಿಕ್ ಟನ್ ಮರಳು ಗುರುತಿಸಲಾಗಿದ್ದು, 3 ಯುನಿಟ್ 5,500 ರೂ.ನಂತೆ ಮರಳು ಜನರಿಗೆ ಲಭಿಸುವ ಸಾಧ್ಯತೆ ಇದೆ. ಅ.15ರಿಂದ ನಾನ್-ಸಿಆರ್‌ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ಪ್ರಾರಂಭ ಮಾಡಲು ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿದೆ. ಇಬ್ಬರು ಗುತ್ತಿಗೆದಾರರು ಅರ್ಹತೆ ಪಡೆದಿದ್ದು, ಉಳಿದ ಒಂಬತ್ತು ಕಡೆಗಳಲ್ಲಿ ಷರತ್ತುಗಳನ್ನು ಸರಳೀಕರಣಗೊಳಿಸಲು ಸಲಹೆ ನೀಡಲಾಗಿದೆ ಎಂದರು.

ಕುಂದಾಪುರ-ಬೈಂದೂರಿನಲ್ಲಿ ಇಕೋ ಸೆನ್ಸಿಟಿವ್ ರೆನ್ ಎಂದು ಗುರುತಿಸಲಾಗಿದ್ದು, ಇಲ್ಲಿ ಮರಳು ದಿಬ್ಬ ತೆರವು ಮಾಡಲು ಅನುಮತಿಗಾಗಿ ಜಿಲ್ಲಾಧಿಕಾರಿ ವರದಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.