ಹಿಂದುಗಳ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿ, ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾ ಫಾತೀಮಾರನ್ನು ಇಸ್ಲಾಂ ಧರ್ಮದಿಂದ ಉಚ್ಛಾಟಿಸಿದ ಕೇರಳ ಮುಸ್ಲಿಂ ಕೌನ್ಸಿಲ್
ಕೇರಳ : ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಬಳಸಿಕೊಂಡು ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ್ದ ಕಿಸ್ ಆಫ್ ಲವ್ ಆಯೋಜಕಿ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾರನ್ನು ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ರೆಹಾನ್ ಫಾತಿಮಾ ಅವರ ನಡೆಯಿಂದಾಗಿ ಲಕ್ಷಾಂತರ ಹಿಂದುಗಳು ಹಾಗೂ ಅವರ ಧಾರ್ಮಿಕ ನಂಬಿಕೆಗಳಿಗೆ ನೋವುಂಟು ಮಾಡಿದೆ. ಆಕೆಯ ನಡವಳಿಕೆ ಹಿಂದೂ ಸಮುದಾಯದ ಆಚರಣೆಗಳಿಗೆ ವಿರುದ್ಧವಾಗಿದೆ ಎಂದು ಪತ್ರಿಕಾ ಹೇಳಿಕೆಯನ್ನು ಕೇರಳ ಮುಸ್ಲಿಮ್ ಜಮಾತ್ ಕೌನ್ಸಿಲ್ ಬಿಡುಗಡೆ ಮಾಡಿದೆ. ಹಾಗಾಗಿ ಆಕೆಗೆ ಮುಸ್ಲಿಂ ಹೆಸರನ್ನು ಬಳಕೆ ಮಾಡಿಕೊಳ್ಳಲು ಯಾವ ಹಕ್ಕು ಇಲ್ಲ ಎಂದಿರುವ ಅವರು ಕೋಮು, ಧಾರ್ಮಿಕ ದ್ವೇಷ ಬಿತ್ತುತ್ತಿರುವ ರೆಹಾನಾ ವಿರುದ್ಧ ಸರ್ಕಾರ ಐಪಿಸಿ ಸೆಕ್ಷನ್ 153A ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ರೆಹಾನಾ ಫಾತಿಮಾ ಅವರನ್ನು ಎರ್ನಾಕುಲಂ ಕೇಂದ್ರ ಮುಸ್ಲಿಂ ಜಮಾತ್ನಿಂದ ಉಚ್ಚಾಟನೆ ಮಾಡಲಾಗಿದ್ದು, ಅವರ ಕುಟುಂಬ ಸದಸ್ಯರನ್ನು ಕೂಡ ಮಹಲ್ಲಾದ ಸದಸ್ಯತ್ವದಿಂದ ಹೊರಹಾಕಲಾಗಿದೆ ಎಂದು ಪರಿಷತ್ ಅಧ್ಯಕ್ಷ ಎ. ಪೂಕುಂಜು ತಿಳಿಸಿದ್ದಾರೆ.

