ಹಿಂದುಗಳ ಭಾವನೆಗೆ ಧಕ್ಕೆ : ಹೋರಾಟಗಾರ್ತಿ ರೆಹಾನಾ ಬಂಧನ ; ಬಿಎಸ್‌ಎನ್‌ಎಲ್ ಹುದ್ದೆಯಿಂದ ಅಮಾನತು
ಕೊಚ್ಚಿ: ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ಬಿಎಸ್‌ಎನ್‌ಎಲ್ ಉದ್ಯೋಗಿ ಹಾಗೂ ಶಬರಿಮಲೆ ಪ್ರವೇಶಿಸಲು ಯತ್ನಿಸಿ ಸುದ್ದಿಯಾಗಿದ್ದ ಹೋರಾಟಗಾರ್ತಿ ರೆಹಾನಾ ಫಾತಿಮಾ ಅವರನ್ನು ಪಟ್ಟನಂತಿಟ್ಟ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಸೆ.30 ರಂದು ರೆಹಾನಾ ಫಾತಿಮಾ ಅಯ್ಯಪ್ಪ ಸ್ವಾಮಿ ಭಕ್ತರಂತೆ ಉಡುಪು ಧರಿಸಿದ ಫೋಟೋವನ್ನು ಫೇಸ್ಬುಕ್ನಲ್ಲಿ ಹಾಕಿದ್ದರು. ಅದಕ್ಕೆ ತತ್ವಮಸಿ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದರು.
ಇತ್ತೀಚಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದ ರೆಹಾನಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನಲೆಯಲ್ಲಿ ಇಂದು ಆರೋಪಿಯನ್ನು ಕೊಚ್ಚಿಯಲ್ಲಿ ವಶಕ್ಕೆ ಪಡೆದ ಪೊಲೀಸರು, ವಿಚಾರಣೆಗಾಗಿ ಪತ್ತನಂತಿಟ್ಟ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ರೆಹಾನಾ ಫಾತಿಮಾ ಅವರ ಕೆಲವೊಂದು ಫೇಸ್ ಬುಕ್ ಪೋಸ್ಟ್‌ಗಳು ಧಾರ್ಮಿಕ ಮನೋಭಾವನೆಯನ್ನು ನೋಯಿಸುವಂತಿದೆ ಎಂದು ಆರೋಪಿಸಿ ರಾಧಾಕೃಷ್ಣ ಮೆನನ್ ಎಂಬವರು ಪತ್ತನಂತಿಟ್ಟ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಫಾತಿಮಾ ವಿರುದ್ಧ ಐಪಿಸಿ ಸೆಕ್ಷನ್ 295ಎ ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು.
ಫಾತಿಮಾ ಕೊಚ್ಚಿ ಶಾಖೆಯಲ್ಲಿ ಗ್ರಾಹಕ ಸಂಪರ್ಕ ವಿಭಾಗದ ಟೆಲಿಕಾಂ ತಂತ್ರಜ್ಞಳಾಗಿ ಕೆಲಸ ಮಾಡುತ್ತಿದ್ದಳು. ರೆಹಾನಾ ಫಾತಿಮಾ ಬಿಎಸ್ಎನ್ಎಲ್ನ ಪಳರಿವತ್ತಮ್ ಟೆಲಿಫೋನ್ ಎಕ್ಸ್ಚೇಂಜ್ನಲ್ಲಿ ಟೆಲಿಕಾಂ ತಂತ್ರಜ್ಞರಾಗಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಮೊದಲು ಕೊಚ್ಚಿ ಶಾಖೆಯಲ್ಲಿ ಇದ್ದ ಅವರನ್ನು ಶಬರಿಮಲೆ ವಿಚಾರದಲ್ಲಿ ಗಲಾಟೆಯಾದ ಬಳಿಕ ಪಳರಿವತ್ತಮ್ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿತ್ತು.. ರೆಹಾನಾ ವರ್ಗಾವಣೆ ವಿಚಾರ ತಿಳಿಯುತ್ತಿದ್ದಂತೆ ಶಬರಿಮಲೆ ಕರ್ಮ ಸಮಿತಿ ಪಳರಿವತ್ತಮ್ ಬಿಎಸ್‌ಎನ್‌ಎಲ್ ಕೇಂದ್ರದ ಬಳಿ ಪ್ರತಿಭಟನೆ ನಡೆಸಿ, ಆಕೆಯನ್ನು ಅಲ್ಲಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿತ್ತು.
ಶಬರಿಮಲೆ ದೇಗುವ ಪ್ರವೇಶಿಸಲು ಪ್ರಯತ್ನಿಸಿ ವಿಫಲವಾಗಿದ್ದ ರೆಹಾನಾ ಫಾತಿಮಾ ಮನೆಯನ್ನು ದುಷ್ಕರ್ಮಿಗಳು ಈಗಾಗಲೇ ಧ್ವಂಸಗೊಳಿಸಿದ್ದರು. ಅಲ್ಲದೆ ಆಕೆ ಲಕ್ಷಾಂತರ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಮೇಲೆ ಎರಡು ದಿನಗಳ ಹಿಂದೆ ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿತ್ತು.
ಈ ಹಿಂದೆ ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದ ಕಿಸ್ ಆಫ್ ಲವ್ ನ ಆಯೋಜಕಿ, ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾಳನ್ನು ಬಿಎಸ್ ಎನ್ ಎಲ್ ಸಂಸ್ಥೆ ಕೆಲಸದಿಂದ ಅಮಾನತು ಮಾಡಿದೆ. ಶಬರಿಮಲೆ ಕುರಿತಂತೆ ಫೇಸ್ ಬುಕ್ ಪೋಸ್ಟ್ ಮೂಲಕ ಹಿಂದೂಗಳ ಭಾವನೆಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ರೆಹಾನಾ ಫಾತಿಮಾ ಬಂಧನಕ್ಕೀಡಾಗಿದ್ದು, ಬಿಎಸ್ ಎನ್ ಎಲ್ ಶಾಕ್ ನೀಡಿದ್ದು, ಆಕೆಯ ಕೆಲಸದಿಂದ ಆಕೆಯನ್ನು ಅಮಾನತು ಮಾಡಿದೆ.
