ಹಿಂದುಯೇತರ ವ್ಯಕ್ತಿಯಿಂದ ಆಹಾರ ಡೆಲಿವರಿ : ಆರ್ಡರ್ ಅನ್ನೇ ಕ್ಯಾನ್ಸಲ್ ಮಾಡಿದ ಗ್ರಾಹಕ : ಆಹಾರಕ್ಕೆ ಯಾವುದೇ ಧರ್ಮವಿಲ್ಲ. ಆಹಾರವೇ ಒಂದು ಧರ್ಮ : ಗ್ರಾಹಕನಿಗೆ ಖಡಕ್ ತಿರುಗೇಟು ನೀಡಿದ ಜೋಮ್ಯಾಟೋ -Vishwanews24
ನವದೆಹಲಿ: ಹಿಂದುಯೇತರ ವ್ಯಕ್ತಿ ಡೆಲಿವರಿ ಮಾಡಲು ಬಂದಿದ್ದ ಅಂತ ಆರ್ಡರ್ ಅನ್ನೇ ಕ್ಯಾನ್ಸಲ್ ಮಾಡಿರುವ ಘಟನೆಯೊಂದು ವರದಿಯಾಗಿದೆ.
ಆರ್ಡರ್ ಮಾಡಿ ನಂತರ ಕ್ಯಾನ್ಸಲ್ ಮಾಡಿರುವ ಅಮಿತ್ ಶುಕ್ಲಾ ಎಂಬಾತ ತನ್ನ ಟ್ವೀಟರ್ ನಲ್ಲಿ ನಾನು ಜೋಮ್ಯಾಟೋ ಆರ್ಡರ್ ಕ್ಯಾನ್ಸಲ್ ಮಾಡಿದ್ದೇನೆ. ಕಾರಣ ಹಿಂದೂ ಅಲ್ಲದ ವ್ಯಕ್ತಿಯ ಕೈಯಲ್ಲಿ ನನಗೆ ಆಹಾರ ಕಳುಹಿಸಲಾಗಿತ್ತು. ನಾನು ಡೆಲಿವರಿ ಬಾಯ್ ನನ್ನ ಬದಲಿಸುವ ಎಂತ ಕೇಳಿದ್ದಕ್ಕೆ ಸಂಸ್ಥೆಯವರು ಆಗಲ್ಲ ಎಂದಿದ್ದಾರೆ ಎಂದು ಬರೆದುಕೊಂಡಿದ್ದರು.
ಆರ್ಡರ್ ಕ್ಯಾನ್ಸಲ್ ಮಾಡಿದ್ದಕ್ಕೆ ಸಂಸ್ಥೆಯವರು ಹಣ ರಿಫಂಡ್ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿತ್, “ನೀವು ಡೆಲಿವರಿ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹಾಕುವಂತಿಲ್ಲ ಮತ್ತು ನನಗೆ ನಿಮ್ಮ ರಿಫಂಡ್ ಸಹ ಬೇಕಿಲ್ಲ. ಹಾಗಾಗಿ ಆರ್ಡರ್ ಕ್ಯಾನ್ಸಲ್ ಮಾಡಿ” ಎಂದು ಟ್ವೀಟರ್’ನಲ್ಲಿ ಜೋಮ್ಯಾಟೋಗೆ ಟ್ಯಾಗ್ ಮಾಡಿದ್ದಾರೆ.
ಇದಕ್ಕೆ ಜೋಮ್ಯಾಟೋ ಪ್ರತಿಕ್ರಿಯಿಸಿದ್ದು, “ಆಹಾರಕ್ಕೆ ಯಾವುದೇ ಧರ್ಮವಿಲ್ಲ. ಆಹಾರವೇ ಒಂದು ಧರ್ಮ” ಎಂದು ಚಿಕ್ಕದಾಗಿ ಬರೆದು ಗ್ರಾಹಕನಿಗೆ ಖಡಕ್ ತಿರುಗೇಟು ನೀಡಿದೆ.
ಇನ್ನು ಇದಕ್ಕೆ ಜೋಮ್ಯಾಟೋ ಸ್ಥಾಪಕ ದೀಪೇಂದ್ರ ಗೊಯಲ್, ನಮಗೆ ಐಡಿಯಾ ಆಫ್ ಇಂಡಿಯಾ, ಗೌರವಯುತ ಗ್ರಾಹಕರು ಮತ್ತು ಪಾಟ್ನರ್ಗಳ ವಿವಿಧತೆಯ ಬಗ್ಗೆ ಹೆಮ್ಮೆ ಇದೆ. ಆದರೆ ನಮ್ಮ ಮೌಲ್ಯಗಳಿಗೆ ಅಡ್ಡಿಯುಂಟು ಮಾಡುವ ವ್ಯವಹಾರವನ್ನು ಕಳೆದುಕೊಳ್ಳುವುದರಿಂದ ನಮಗೆ ಯಾವುದೇ ರೀತಿಯ ದುಃಖ ಆಗಲಾರದು ಎಂದು ಬರೆದು ತ್ರಿವರ್ಣ ಧ್ವಜದ ಟಿಕ್ಕರ್ ಹಾಕಿದ್ದಾರೆ.
