ಹಿಂದೂ ನಾಯಕರ ರಕ್ಷಣೆಗೆ ಸಿಎಂ ಸೂಕ್ತ ಕಾಳಜಿ ವಹಿಸಲಿ : ಶಾಸಕ ಹರೀಶ್ ಪೂಂಜ

Featured, ದಕ್ಷಿಣ ಕನ್ನಡ

ಬೆಳ್ತಂಗಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ, ವಿಶ್ವ ಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಮತ್ತು ಶರಣ್ ಪಂಪುವೆಲ್‍ ಅವರನ್ನು ಆತ್ಮಹತ್ಯಾ ದಾಳಿಯ ಮೂಲಕ ಹತ್ಯೆ ಮಾಡುವ ಸಂಚು ನಡೆಸಲಾಗಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರಕಾರವೂ ಕೂಡಲೇ ಜಾಗೃತವಾಗಿ ಎಲ್ಲಾ ಹಿಂದೂ ನಾಯಕರ ರಕ್ಷಣೆಗೆ ಸೂಕ್ತ ಭದ್ರತೆ ನೀಡಬೇಕು, ಸೂಕ್ಷ್ಮ ಪ್ರದೇಶವಾದ ಕರಾವಳಿ ಜಿಲ್ಲೆಯಲ್ಲಿ ಏನಾದರೂ ಅನಾಹುತವಾದರೆ ಅದಕ್ಕೆ ರಾಜ್ಯ ಸರಕಾರವೇ ನೇರ ಹೊಣೆಯಾಗಲಿದ್ದು ಜಿಲ್ಲೆಯ ಶಾಂತಿ ಕದಡದಂತೆ ಮುಂಜಾಗೃತೆ ವಹಿಸಬೇಕು.

ಸ್ವತಃ ಗುಪ್ತಚರ ಇಲಾಖೆಯನ್ನು ಹೊಂದಿರುವ ಮುಖ್ಯಮಂತ್ರಿಗಳು ಪ್ರಕರಣದ ಗಂಭೀರತೆಯನ್ನು ಅರಿತು ಆಧುನಿಕ ತಂತ್ರಜ್ಞಾನವನ್ನು ಬಳಸಿ ಆತ್ಮಹತ್ಯಾ ದಾಳಿಯ ಸಂಚಿನ ಮೂಲವನ್ನು ಶೋಧಿಸಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕರು ಮನವಿ ಮಾಡಿಕೊಂಡಿದ್ದಾರೆ.