ಹಿಂದೂ ಸಮಾಜ ಒಡೆಯುವುದೇ ಕಾಂಗ್ರೆಸ್ ಸರ್ಕಾರದ ಮುಖ್ಯ ಅಜೆಂಡ : ಕೆ.ಎಸ್.ಈಶ್ವರಪ್ಪ – vishwanews24
ಜಾತಿ ಜನಗಣತಿಯ ವಿವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ : ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ : ಹಿಂದೂ ಸಮಾಜ ಒಡೆಯುವುದೇ ಕಾಂಗ್ರೆಸ್ ಸರ್ಕಾರದ ಮುಖ್ಯ ಅಜೆಂಡವಾಗಿದ್ದು, ಜಾತಿ ಜನಗಣತಿ ಹೆಸರಿನಲ್ಲಿ ಹಿಂದೂ ಸಮಾಜಕ್ಕೆ ಅನ್ಯಾಯ ಮಾಡುತ್ತಿದೆ. ಜಾತಿ ಜನಗಣತಿಯ ವಿವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಈ ಹಿಂದೆ ನಡೆಸಿದ ಕಾಂತರಾಜ್ ವರದಿಯನ್ನೇ ಯಥಾವತ್ತಾಗಿ ಜಾರಿಗೆ ತರುತ್ತೇನೆ ಎಂದು ಹೇಳುತ್ತಿದ್ದ ಸಿದ್ದರಾಮಯ್ಯನವರು ನಂತರ ಹೈಕಮಾಂಡ್ ಒತ್ತಡಕ್ಕೆ ಮಣಿದು ಮತ್ತೆ ಜನಗಣತಿ ಮಾಡುವುದಾಗಿ ಹೇಳಿದ್ದರು. 150 ಕೋಟಿಗೂ ಅಧಿಕ ಹಣವನ್ನು ವ್ಯಯಿಸಿ ಮಾಡಿದ ಗಣತಿಯನ್ನು ಕಸದ ಬುಟ್ಟಿಗೆ ಎಸೆದು ಈಗ ಮತ್ತೆ ಸುಮಾರು 420 ಕೋಟಿ ರು. ವೆಚ್ಚದಲ್ಲಿ ಗಣತಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ಈ ಹಿಂದಿನ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿ ಪಟ್ಟಿಯಲ್ಲಿ ಮತಾಂತರಗೊಂಡ ಹಿಂದೂಗಳಿಗಾಗಿಯೇ ಹೆಚ್ಚುವರಿ ಜಾತಿಗಳನ್ನು ಸೃಷ್ಟಿಸಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್, ಈ ರೀತಿ ಸುಮಾರು 50ಕ್ಕೂ ಹೆಚ್ಚು ಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಹೆಸರಿನಲ್ಲಿ ಸೇರಿಸಿ ಹಿಂದೂಯೇತರ ಧರ್ಮೀಯರ ಜನಸಂಖ್ಯೆಯನ್ನು ವ್ಯವಸ್ಥಿತವಾಗಿ ಹೆಚ್ಚು ತೋರಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯಗೆ ಸಿಎಂ ಕುರ್ಚಿ ಮೇಲೆ ಮಾತ್ರ ಆಸೆ ಇದೆ. ಮುಖ್ಯಮಂತ್ರಿ ಸ್ಥಾನ ಹೋಗುತ್ತೆ ಎಂಬ ಕಾಂತರಾಜ್ ವರದಿ ಒಪ್ಪಿಕೊಳ್ಳದೆ ಪುನಃ ಜಾತಿ ಜನಗಣತಿಗೆ ಅದೇಶ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾತಿ ಜನಗಣತಿ ಹೊರ ಬರಲು ಸಾಧ್ಯವಿಲ್ಲ ಎಂದು ಟೀಕಿಸಿದರು.ಆರೋಪ-ಪ್ರತ್ಯಾರೋಪ ಬಿಟ್ಟು ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಿ: ಶಿವಮೊಗ್ಗದ ವಿಮಾನ ನಿಲ್ದಾಣ ಆರಂಭಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಬ್ಬರ ಕೊಡುಗೆಯೂ ಇದೆ. ವಿಮಾನ ನಿಲ್ದಾಣ ವಿಚಾರದಲ್ಲಿ ರಾಜಕೀಯ ಮಾಡದೆ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಇಬ್ಬರೂ ಕೂತು ಚರ್ಚೆ ನಡೆಸಿ ಅಭಿವೃದ್ಧಿಪಡಿಸಬೇಕು ಎಂದು ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.
