ಹಿಜಾಬ್ ಮುಖ್ಯ ಅಲ್ಲ-ಶಿಕ್ಷಣ ಎಲ್ಲದನ್ನ ಮೀರಿದೆ: ಖ್ಯಾತ ಗಾಯಕಿ ಸುಹಾನಾ ಸೈಯದ್: vishwanews24
ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಸಂಘರ್ಷ ನಡೆಯುತ್ತಿದೆ. ಹಿಜಾಬ್(Hijab) ಧರಿಸುವವರ ವಿರುದ್ಧ ಕೇಸರಿ ಶಾಲ್(Kesari Shwal) ಧರಿಸಿ ಯುವಕ-ಯುವತಿಯರು ರಸ್ತೆಗಿಳಿದಿದ್ದಾರೆ. ಜ್ಞಾನ ದೇಗುಲದಲ್ಲಿ ಧರ್ಮ, ಜಾತಿಗಳ ನಡುವೆ ಸಂಘರ್ಷವಾಗುತ್ತಿದೆ. ಫೆಬ್ರವರಿ 08ರಂದು ರಾಜ್ಯದ 19 ಜಿಲ್ಲೆಗಳ 55 ಕಾಲೇಜುಗಳಲ್ಲಿ ಪ್ರತಿಭಟನೆ ನಡೆದಿದೆ. 5 ಜಿಲ್ಲೆಗಳ 7 ಕಾಲೇಜುಗಳಲ್ಲಿ ಘರ್ಷಣೆಯಾಗಿದೆ. ಸದ್ಯ ಹಿಜಾಬ್ ವಿವಾದದ ಬಗ್ಗೆ ಗಾಯಕಿ ಸುಹಾನಾ ಸೈಯದ್(Suhana Syed) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಹಿಂದೇ ಗಾಯಕಿ ಸುಹಾನಾ ಕೂಡ ಇದೇ ರೀತಿ ವಿವಾದಕ್ಕೆ ಗುರಿಯಾಗಿದ್ದರು. ಸಿಂಗಿಂಗ್ ರಿಯಾಲಿಟಿ ಶೋ ನಲ್ಲಿ ಹಿಂದೂ ದೇವರನಾಮ ಹಾಡಿದ್ದ ಸುಹಾನಾ ವಿವಾದಕ್ಕೆ ಒಳಗಾಗಿದ್ದರು.

ಯಕಿ ಸುಹಾನಾ ಸೈಯದ್, ಸಿಂಗಿಂಗ್ ರಿಯಾಲಿಟಿ ಶೋ ನಲ್ಲಿ ಹಿಜಾಬ್ ಧರಿಸಿ ಶ್ರೀಕಾರನೇ ಶ್ರೀನಿವಾಸನೇ ಎಂಬ ಗೀತೆ ಹಾಡಿದ್ದರು. ಇದೇ ಕಾರಣಕ್ಕೆ ಸುಹಾನಾ ವಿರುದ್ಧ ಮುಸ್ಲಿಂ ಮೂಲಭೂತವಾದಿಗಳು ತಿರುಗಿಬಿದ್ದಿದ್ದರು. ಸದ್ಯದ ಹಿಜಾಬ್ ವಿವಾದದ ಬಗ್ಗೆ ಸುಹಾನಾ ಪ್ರತಿಕ್ರಿಯಿಸಿದ್ದಾರೆ. ನಾನು ಮುಸ್ಲಿಂ ಕುಟುಂಬಕ್ಕೆ ಸೇರಿದವಳು. ಆದರೆ ನಾನು ಹಿಜಾಬ್ ಹಾಕುವುದಿಲ್ಲ. ಹಾಗಂತ ನಾನು ಹಿಜಾಬ್ ವಿರೋಧಿ ಖಂಡಿತ ಅಲ್ಲ. ನಾನು ಹಿಜಾಬ್ ಹಾಕುವುದಿಲ್ಲ ಎಂದು ವಿರೋಧಿಸಿದವರೂ ಇದ್ದಾರೆ. ಬಟ್ಟೆ ಹಾಕೋದು ಅವರವರ ಸ್ವಾತಂತ್ರ್ಯ. ಆದರೆ ಶಿಕ್ಷಣ ಎಲ್ಲದನ್ನೂ ಮೀರಿ ನಿಂತಿದೆ. ಹೆಣ್ಣು ಮಕ್ಕಳ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಧರ್ಮ, ಜಾತಿ, ಲಿಂಗ, ಬಟ್ಟೆ ಎಲ್ಲದನ್ನೂ ಮೀರಿರೋದು ಶಿಕ್ಷಣ. ಹಿಂದೆ ಹೆಣ್ಣು ಮಕ್ಕಳು ಮನೆಯಿಂದ ಹೊರ ಬಂದು ಓದಲು ಕಷ್ಟಪಡುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಪ್ರತಿ ಹೆಣ್ಣು ಮಗುವಿಗೆ ಶಿಕ್ಷಣ ಸಿಕ್ತಿದೆ. ಇದಕ್ಕಿಂತ ಖುಷಿ ವಿಚಾರ ಇನ್ನೊಂದಿಲ್ಲ. ಶಿಕ್ಷಣ ಪಡೆಯುವ ಪ್ರತಿ ಹೆಣ್ಣಿನ ಪರ ನನ್ನ ಬೆಂಬಲವಿದೆ. ಕೇವಲ ಬಟ್ಟೆ ವಿಚಾರಕ್ಕೆ ಶಿಕ್ಷಣ ವಂಚಿತರಾಗೋದು ತಪ್ಪು ಎಂದು ಸುಹಾನಾ ಸೈಯದ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

