ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ದುರಂತ ; ಕಂದಕಕ್ಕೆ ಉರುಳಿದ ಖಾಸಗಿ ಬಸ್, 7 ಮಂದಿ ಮೃತ್ಯು -vishwanews24
ಹಿಮಾಚಲ ಪ್ರದೇಶದಲ್ಲಿ ಭೀಕರ ರಸ್ತೆ ದುರಂತ ; ಕಂದಕಕ್ಕೆ ಉರುಳಿದ ಖಾಸಗಿ ಬಸ್, 7 ಮಂದಿ ಮೃತ್ಯು
ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್ವೊಂದು ಆಳವಾದ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ ಏಳು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈರಾಗಢ-ಚಂಬಾ ಮಾರ್ಗದ ದೇವಿಕೋಠಿ ಬಳಿ ಈ ದುರಂತ ಸಂಭವಿಸಿದೆ. ಬೈರಾಗಢದಿಂದ ಚಂಬಾಗೆ ತೆರಳುತ್ತಿದ್ದ ಖಾಸಗಿ ಬಸ್, ದೇವಿಕೋಠಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯಿಂದ ಜಾರಿ ಆಳವಾದ ಕಂದಕಕ್ಕೆ ಬಿದ್ದಿದೆ. ಅಪಘಾತದ ವೇಳೆ ಬಸ್ನಲ್ಲಿ ಒಟ್ಟು 22 ಪ್ರಯಾಣಿಕರಿದ್ದರು. ಈ ಪೈಕಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು, ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿವೆ.
ಪ್ರಪಾತಕ್ಕೆ ಬಿದ್ದಿದ್ದ ಗಾಯಾಳುಗಳನ್ನು ಮೇಲಕ್ಕೆತ್ತಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
