ಹೆಜಮಾಡಿ : ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ: ನಾಲ್ವರ ಬಂಧನ – vishwanews24
ಹೆಜಮಾಡಿ : ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ: ನಾಲ್ವರು ಬಂಧನ
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಟೋಲ್ ಪ್ಲಾಜಾ ಬಳಿ ಸೂಕ್ತ ಪರವಾನಗಿಯಿಲ್ಲದೆ ಗೋವಾದಿಂದ ಮಂಗಳೂರಿಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ನಾಲ್ವರನ್ನು ಪಡುಬಿದ್ರಿ ಪೊಲೀಸರು ಬುಧವಾರದಂದು ಬಂಧಿಸಿದ್ದಾರೆ.
ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪಡುಬಿದ್ರಿ ಠಾಣಾ ವ್ಯಾಪ್ತಿಯ ಪೊಲೀಸರು, ಮದ್ಯ ಸಾಗಿಸುತ್ತಿದ್ದ ವಾಹನ ಹಾಗೂ ಅದಕ್ಕೆ ಎಸ್ಕಾರ್ಟ್ ನೀಡುತ್ತಿದ್ದ ಇನ್ನೊಂದು ಕಾರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಕಾರವಾರ ತಾಲೂಕಿನ ಕಿನ್ನರ ಗ್ರಾಮದ ನಿವಾಸಿ ವಿನಯ್ (47), ನಂದಗಡ ಸುಳಕೇರಿ ರಸ್ತೆಯ ಗಜಾನನ ಮಹಾಬಲೇಶ್ವರ ನಾಯ್ಕ್ (45), ಅಮಾಡಳ್ಳಿ ಪೋಸ್ಟ್ನ ಸುಜಿತ್ ತಾಳೇಕರ (25) ಮತ್ತು ಶಿರವಾಡ ಗ್ರಾಮದ ಲಾರೆನ್ಸ್ ಥಾಮಸ್ ಮೆಂಡೋನ್ಸಾ (49) ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಂದಾಜು 14.35 ಲಕ್ಷ ರೂ. ಮೌಲ್ಯದ ಸುಮಾರು 2,583 ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಸಾಗಾಟಕ್ಕೆ ಬಳಸಿದ್ದ 5 ಲಕ್ಷ ರೂ. ಮೌಲ್ಯದ ಮಹೀಂದ್ರಾ ಇನ್ಸುಲೇಟೆಡ್ ಪಿಕ್ಅಪ್ ವಾಹನ ಮತ್ತು 3 ಲಕ್ಷ ರೂ. ಮೌಲ್ಯದ ಮಾರುತಿ ಸ್ವಿಫ್ಟ್ ಕಾರನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ ಸುಮಾರು 22.35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 138/2026ರಡಿ ಕರ್ನಾಟಕ ಅಬ್ಕಾರಿ ಕಾಯ್ದೆಯ ಕಲಂ 32, 34, 38(ಎ) ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಕಲಂ 336(4)ರ ಪ್ರಕಾರ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿಗಳಲ್ಲಿ ಒಬ್ಬನಾದ ವಿನಯ್ ವಿರುದ್ಧ ಈ ಹಿಂದೆ ಕಾರವಾರ ಗ್ರಾಮಾಂತರ, ಚಿತ್ತಾಕುಲ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಬ್ಕಾರಿ ಪೊಲೀಸ್ ಠಾಣೆಗಳಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯು ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಸೂಪರಿಂಟೆಂಡೆಂಟ್ ಇಶಿತಾ ಗುಪ್ತಾ, ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಜಿ. ಅವರ ನೇತೃತ್ವದಲ್ಲಿ ನಡೆದಿದೆ.
ಕಾರ್ಯಾಚರಣೆಯಲ್ಲಿ ಪಡುಬಿದ್ರಿ ಠಾಣೆಯ ಎಸ್ಐ (ಕಾಯ್ದೆ ಮತ್ತು ಸುವ್ಯವಸ್ಥೆ) ಶಕ್ತಿವೇಲು ಇ., ಎಸ್ಐ (ಅಪರಾಧ ತನಿಖೆ) ಅನಿಲ್ ಕುಮಾರ್ ಟಿ. ನಾಯ್ಕ್, ಅಪರಾಧ ಪತ್ತೆ ದಳದ ಸಿಬ್ಬಂದಿ ರಾಜೇಶ್ ಮತ್ತು ಗಿರೀಶ್, ಎಎಸ್ಐಗಳು, ಹೆಡ್ ಕಾನ್ಸ್ಟೇಬಲ್ಗಳಾದ ಕೃಷ್ಣಪ್ರಸಾದ್, ಜೀವನ್, ಸತೀಶ್ ಬೆಳ್ಳೆ, ಶಿವಾನಂದ ಪೂಜಾರಿ, ಸಿಬ್ಬಂದಿ ಅಶ್ವಿನ್ ಕುಮಾರ್, ಕಾನ್ಸ್ಟೇಬಲ್ಗಳಾದ ಶರಣ್, ಯಾಸಿನ್ ಖಾಜಿ, ರೆಹಮಾನ್, ರುಕ್ಮಿಣಿ ಹಾಗೂ ಸಿಡಿಆರ್ ವಿಭಾಗದ ದಿನೇಶ್ ಭಾಗವಹಿಸಿದ್ದರು.
