ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು 10 ದಿನ ಅವಕಾಶ ನೀಡಲಾಗಿತ್ತು : ಸಚಿವ ಎಚ್.ಡಿ.ರೇವಣ್ಣ -Vishwanews24
ಮೈಸೂರು: ಅಟಲ್ ಬಿಹಾರಿ ವಾಜಪೇಯಿ ಅವರಿಗೆ ವಿಶ್ವಾಸಮತ ಸಾಬೀತುಪಡಿಸಲು 10 ದಿನ ಅವಕಾಶ ನೀಡಲಾಗಿತ್ತು. ವಿಶ್ವಾಸಮತ ಸಾಬೀತುಪಡಿಸುವ ಕುರಿತು ಸ್ಪೀಕರ್ ಅಂತಿಮ ತೀರ್ಮಾನ ಕೈಗೊಳ್ಳುವರು ಎಂದು ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಎಚ್.ಡಿ. ರೇವಣ್ಣ ಆಷಾಢ ಶುಕ್ರವಾರವಾದ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಗೆ ತಮ್ಮ ಸಹೋದರ ಎಚ್.ಡಿ. ಕುಮಾರಸ್ವಾಮಿ ಹಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ವಿಶ್ವಾಸಮತ ಯಾಚನೆ ಮಾಡಲು 12ನೇ ತಾರೀಖು ರಾಜ್ಯಪಾಲರ ಬಳಿ ಸಮಯ ಕೇಳಿದ್ದರು. ಅಂದು ಸಭೆಗೆ ಬಿಜೆಪಿಯವರು ಬರಲಿಲ್ಲ. ಅವರು ಬರಲಿಲ್ಲ ಎಂದರೆ ನಾವೇನು ಮಾಡೋದು..? ಬಳಿಕ 18ನೇ ತಾರೀಖಿಗೆ ವಿಶ್ವಾಸಮತ ಯಾಚನೆಗೆ ಸಮಯ ನಿಗದಿಯಾಗಿತ್ತು. ಇದೀಗ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸ್ಪೀಕರ್ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈ ಹಿಂದೆ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಾಸಮತ ಸಾಬೀತುಪಡಿಸಲು 10 ದಿನ ಸಮಯ ತೆಗೆದುಕೊಂಡಿದ್ದರು ಎಂದು ತಿಳಿಸಿದರು.

